ಬಾಲಕನ ಆಸೆ ಈಡೇರಿಸಿದ ದ್ವಾರಪಾಲಕ
ಬೀರಾ ಪಟ್ಟಣದ ಜಾತ್ರೆಗೆಂದು ಆ ಊರಿಗೆ ಒಂದು ಸರ್ಕಸ್ ಕಂಪನಿ ಬಂದಿತ್ತು.ಆ ಕಂಪನಿಯವರು ಪಟ್ಟಣದ ಸರ್ಕಾರಿ ಶಾಲೆಯ ರಸ್ತೆ ಪಕ್ಕ ಇರುವ ದೊಡ್ಡ ಮೈದಾನದಲ್ಲಿ ಟೆಂಟ್ ಹಾಕಿದ್ದರು.ಗೋಪಿ ಆ ಶಾಲೆಯಲ್ಲಿ ಆರನೇಯ
ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ.ಆತ ನಿತ್ಯ ಆ ದಾರಿಯಲ್ಲಿ ಹೋಗಿ ಬರುವಾಗಲೆಲ್ಲ ಸರ್ಕಸ್ ಕಂಪನಿ ಯವರು ಹಾಕಿದ್ದ ಆಕರ್ಷಕ ದೊಡ್ಡ ದೊಡ್ಡ ಬೋರ್ಡ್ ಗಳನ್ನು ಬೆರಗು ಕಣ್ಣುಗಳಿಂದ ನೋಡುತ್ತಿದ್ದ.ಶಾಲೆಯಲ್ಲಿ ಆ ಸರ್ಕಸ್
ನೋಡಿ ಬಂದ ಮಿತ್ರರು ರಂಗು ರಂಗಾಗಿ ವಿವರಿಸಿ ಹೇಳುತ್ತಿದ್ದರು.
ಇದರಿಂದಾಗಿ ಪುಟ್ಟ ಬಾಲಕ ಗೋಪಿಗೂ ಸರ್ಕಸ್ ನೋಡಬೇಕೆಂಬ ಹೆಬ್ಬಯಕೆ ಉಂಟಾಯಿತು.ಆದರೆ ಗೋಪಿಯ ಪೋಷಕರು ತುಂಬ ಬಡವರಾಗಿದ್ದರಿಂದ ಅಷ್ಟೊಂದು ಹಣ ತೆತ್ತು ಹೋಗಿ ನೋಡುವುದು ಆತನಿಗೆ ಕಷ್ಟದ ಮಾತಾಗಿತ್ತು.
ದಿನ ನಿತ್ಯ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಹೋಗುವಾಗಲೆಲ್ಲ
ಸರ್ಕಸ್ ಕಂಪನಿಯತ್ತ ನೋಡುತ್ತಿದ್ದುದರಿಂದ ತಾನು ಹೇಗಾದರೂ ಮಾಡಿ ಸರ್ಕಸ್ ನೋಡಬೇಂದು ಯೋಚಿಸಿದ.ಅಂದು ಸಂಜೆ ಶಾಲೆಯಿಂದ ಮನೆಗೆ ಹೋಗಿ ಬಂದವ, ಸರ್ಕಸ್ ಕಂಪನಿಯ ದ್ವಾರಪಾಲಕನ ಕಣ್ಣು ತಪ್ಪಿಸಿ ಆ ದೊಡ್ಡ ಟೆಂಟ್ ಹಿಂಭಾಗಕ್ಕೆ ಬಂದು ಆಚೆ ಈಚೆ ನೋಡಿದ.ಆಗ ಅವನಿಗೆ ಒಂದು ಕಿಂಡಿ ಕಂಡಿತು.
ಆದರೆ ಅದು ಸ್ವಲ್ಪ ಎತ್ತರದಲ್ಲಿತ್ತು.ಏನು ಮಾಡುವುದು? ಎಂದು ಯೋಚಿಸುತ್ತಿದ್ದಾಗ ಅವನ ಕಣ್ಣಿಗೆ ಖಾಲಿ ಡ್ರಮ್ ಕಂಡಿತು.ಓಡಿ ಹೋಗಿ ಅದನ್ನು ಎಳೆದು ತಂದು ಏರಲು ಮುಂದಾದ.ಅಷ್ಟರಲ್ಲಿ ಅಲ್ಲಿಗೆ ಬಂದ ದ್ವಾರಪಾಲಕನ ಕೈಗೆ ಸಿಕ್ಕಿಬಿದ್ದ. ಆತನ ಆಕಾರ, ಮೀಸೆ..ಗಡಸು ಧ್ವನಿಗೆ ಹೆದರಿದ ಗೋಪಿ, ಕಣ್ಣೀರು ಸುರಿಸುತ್ತ ತನ್ನ ಎರಡೂ ಕೈ ಜೋಡಿಸಿ”ಅಂಕಲ್.. ತಪ್ಪಾಯ್ತು, ನನಗೆ ಸರ್ಕಸ್ ನೋಡುವ ಆಸೆ ತುಂಬಾ ಆಗಿತ್ತು, ಆದರೆ..ಅಷ್ಟೊಂದು ಕಾಸು ಕೂಡ ನನ್ನ ಬಳಿ ಇರಲಿಲ್ಲ…
ಅದಕ್ಕೇ”ಎಂದು ಬಿಕ್ಕುತ ಹೇಳಿದ.ಪುಟ್ಟ ಬಾಲಕನ ಆಸೆ,ನೇರನುಡಿ ಆಲಿಸಿದ ಆ ದ್ವಾರಪಾಲಕನಿಗೆ ಆತನ ಬಗ್ಗೆ ಕರುಣೆ ಹುಟ್ಟಿತು.”ಬಾ…ನನ್ನ ಜೊತೆ”ಎಂದು ಗೋಪಿಯನ್ನು ಅಲ್ಲಿದ್ದ ಕ್ಯಾಂಟೀನ್ ಗೆ ಕರೆದುತಂದ.ಅದೇ ಕಾಲಕ್ಕೆ ಆ ಕ್ಯಾಂಟೀನ್ ಸಿಬ್ಬಂದಿಯೊಬ್ಭ ಸರ್ಕಸ್ ನಡೆಯುವ ಸ್ಥಳದಲ್ಲಿ ಬ್ಯಾಂಡ್ ಬಾರಿಸುವ ತಂಡಕ್ಕೆ ಚಹಾ-ಬಿಸ್ಕತ್ತು ಕೊಂಡೊಯ್ಯುತ್ತಿದ್ದ.
ದ್ವಾರಪಾಲಕ ಆತನಿಗೆ ಗೋಪಿಯ ಆಸೆ ವಿವರಿಸಿದ.ಆಗ ಆ ಸಿಬ್ಬಂದಿಯವ
ತಾನು ತಲೆಯ ಮೇಲೆ ಧರಿಸಿದ ಉದ್ದನೆಯ ಟೋಪಿಯ ತರಹದ ಟೋಪಿಯನ್ನು ಗೋಪಿಯ ತಲೆಗೆ ಹಾಕಿ, ಅವನ ಕೈಯಲ್ಲಿ ಬಿಸ್ಕತ್ ಇರುವ ಟ್ರೇ ಕೊಟ್ಟು, ತನ್ನ ಜೊತೆಗೆ ಒಳಗೆ ಕರೆದೊಯ್ದು.ಒಳಗಡೆ ಇದ್ದ ಸೂಪರ್ವೈಸರ್, ಕ್ಯಾಂಟೀನ್
ಸಿಬ್ಬಂದಿಯವನಿಗೆಗೋಪಿಯತ್ತ ಬೆರಳು ತೋರಿಸಿ “ಯಾರೀತ..?”ಎಂದು ಕೇಳಿದಾಗ ಆತ, ಇವ ನಮ್ಮ ಹುಡುಗ ಎಂದಷ್ಟೇ ಹೇಳಿ ಗೋಪಿಯನ್ನು ಸರ್ಕಸ್ ನಡೆಯುವ ಸ್ಥಳಕ್ಕೆ ಕರೆದೊಯ್ದು. ಆರಂಭದಿಂದಲೂ ಅಂತ್ಯದ ವರೆಗೆ ಅದೂ ಹತ್ತಿರದಿಂದ ಸರ್ಕಸ್ ನೋಡಲು ಅನುವು ಮಾಡಿ ಕೊಟ್ಟ.ಅದೇ ಪ್ರ ಪ್ರಥಮ ಬಾರಿಗೆ ಸರ್ಕಸ್ ನೋಡಿದ ಗೋಪಿಗೆ ಆನಂದ, ಆಶ್ಚರ್ಯ ಎರಡೂ ಉಕ್ಕಿ ಬಂದಿತ್ತು.ಆ ಸರ್ಕಸ್ ಷೋ ಮುಗಿದ ನಂತರ ತನ್ನ ಅದಮ್ಯ ಆಸೆ ಈಡೇರಿಸಿಕೊಟ್ಟ ದ್ವಾರಪಾಲಕನಿಗೆ ಮನತುಂಬ ಧನ್ಯವಾದ ಹೇಳಿ ಖುಷಿ ಖುಷಿ ಯಿಂದ ಮನೆಯತ್ತ ಹೆಜ್ಜೆ ಹಾಕಿದ.