ಹನುಮನ ಸಹಾಯ
ಹಾನಾಪುರ ಬಯಲುನಾಡಿನ ಒಂದು ಪುಟ್ಟ ಹಳ್ಳಿ.ಅಲ್ಲಿ ಬಸಮ್ಮ ಎಂಬ ಅರವತ್ತರ ಅಜ್ಜಿ ವಾಸಿಸುತ್ತಿದ್ದಳು.ಜೀವನ ಸಾಗಿಸಲು ಹಾಲಿನ ವ್ಯಾಪಾರ ಮಾಡಿಕೊಂಡಿದ್ದಳು. ಬಸಮ್ಮ ಆಂಜನೇಯ ಸ್ವಾಮಿಯ ಪರಮ ಭಕ್ತೆ.ನಿತ್ಯವೂ ಬೆಳಿಗ್ಗೆ-ಸಂಜೆ, ಊರಾಚೆ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಪ್ಪದೇ ಹೋಗುತ್ತಿದ್ದಳು.ಅಲ್ಲಿ ತನ್ನ ಕೈ ಯಲ್ಲಾಗುವ ಸೇವೆ ಮಾಡಿ ಮನೆಗೆ ಹಿಂತಿರುಗುತ್ತಿದ್ದಳು.
ಹೀಗೆ ಒಂದು ಸಂಜೆ ಮನೆಯ ಕಡೆಗೆ ಬರುವ ದಾರಿಯಲ್ಲಿ ಗಾಯಗೊಂಡು ನರಳುತ್ತಿರುವ ಪುಟ್ಟ ಮಂಗನ ಮರಿ ಕಂಡಳು.”ಅಯ್ಯೋ.ಪಾಪಎನ್ನುತ್ತ ಅದರ ಬಳಿ ತೆರಳಿ ಮೆಲ್ಲಗೆ ಅದನ್ನೆತ್ತಿಕೊಂಡು ಮನೆಗೆ ಬಂದಳು.ಅದಕ್ಕೆ ನೀರು,ಆಹಾರ ನೀಡಿ ಉಪಚರೀಸಿದಳು. ಮೂರು ದಿನಗಳ ನಂತರ ಆ ಪುಟ್ಟ ಮಂಗನ ಮರಿ ಸಂಪೂರ್ಣ ಚೇತರಿಸಿಕೊಂಡು ಓಡಾಡತೊಡಗಿತು.ಅದರ ಮುಗ್ಧತೆ, ಆತ್ಮೀಯತೆ ಕಂಡು ಬಸಮ್ಮ ಅದಕ್ಕೆ”ಹನುಮ” ಎಂದೇ ನಾಮಕರಣ ಮಾಡಿಬಿಟ್ಟಳು.
ಮನೆಯ ಆಸುಪಾಸು ಅದು ಎಲ್ಲೇ ಇದ್ದರೂ ಸರಿ, ಒಂದು ಬಾರಿ ಬಸಮ್ಮ”ಹ ನು ಮಾ”ಎಂದು ಕೂಗಿದರೆ ಸಾಕು, ಕ್ಷಣಾರ್ಧದಲ್ಲಿ ಅವಳೆದುರು ಹಾಜರಾಗುತ್ತಿತ್ತು.ದಿನಕಳೆದಂತೆ “ಹನುಮ” ಬಸಮ್ಮ ಮಾಡುತ್ತಿದ್ದ ಕೆಲಸಗಳಲ್ಲಿ ಚಿಕ್ಕ ಚಿಕ್ಕ ಸಹಾಯ ಮಾಡತೊಡಗಿತು.ಹೀಗಾಗಿ ಇವರಿಬ್ಬರಲ್ಲಿ ಆತ್ಮ ವಿಶ್ವಾಸ, ಆತ್ಮೀಯತೆ ಹೆಚ್ಚಾಗಿ ಪರಸ್ಪರರು ಬಿಟ್ಟಿರದಂತಾದರು.ಹಗಲು ವೇಳೆ ಬಸಮ್ಮ ನ ಜೊತೆ ಇರುತ್ತಿದ್ದ ಹನುಮ, ರಾತ್ರಿ ಯಾಯಿತೆಂದರೆ ಸಾಕು ಮನೆಯ ಹಿಂದಿನ ತೆಂಗಿನ ಮರ ಏರಿ ಕುಳಿತು ಬಿಡುತ್ತಿತ್ತು. ಮತ್ತೆ ಮಾರನೇ ದಿನ ಸೂರ್ಯೋದಯಕ್ಕೂ ಮೊದಲ ಬಸಮ್ಮ ನ ಮನೆಯ ಜಗುಲಿಯ ಮೇಲೆ ಹಾಜರ್ ಆಗುತ್ತಿತ್ತು.
ಆಗ ಬೇಸಿಗೆ ಕಾಲದ ಒಂದು ದಿನ, ವಿಪರೀತ ಸೆಕೆ ತಾಳದ ಬಸಮ್ಮ,ಆ ರಾತ್ರಿ ತನ್ನ ಮನೆಗೆ ಬೀಗ ಹಾಕಿ ಜಗುಲಿಯ ಮೇಲೆ ಮಲಗಿದ್ದಳು. ಬೆಳಗಿನ ಜಾವ ಅವಳ ಮನೆಯೊಳಗಿಂದ ಬಂದ ಶಬ್ದ ಕೇಳಿಸಿಕೊಂಡು, ಮೆಲ್ಲನೆ ಕಿಟಕಿಯ ಬಾಗಿಲು ಅರೆಬರೆ ತೆರೆದು ಇಣುಕಿ ನೋಡಿದಳು. ಮುಸುಕ ಧಾರಿ ಕಳ್ಳನೊಬ್ಬ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಹಣ, ಒಡವೆ ಕದ್ದು ಜೇಬಿಗಿಳಿಸುತ್ತಿದ್ದ.
ಅದನ್ನು ಕಂಡ ಬಸಮ್ಮ ತಡಮಾಡದೇ ಏರು ಧ್ವನಿಯಲ್ಲಿ”ಕಳ್ಳಾ..ಕಳ್ಳಾ..”ಎಂದು ಬೊಬ್ಬೆ ಹಾಕತೊಡಗಿದಳು.ಇವಳ ಅರಚಾಟ ಗಮನಿಸಿದ ಕಳ್ಳ ,ಮನಸ್ಸಿನಲ್ಲಿ”ಆಯ್ತು.ಇನ್ನು ನನ್ನ ಕತೆ ಮುಗಿದಂತೆ ಎಂದು”ಅಂದುಕೊಳ್ಳುತ್ತ ಗಾಬರಿಯಿಂದ ಮನೆಯ ಹಿಂಬಾಗಿಲು ತೆರೆದು ಓಡತೊಡಗಿದ.ಅವನ ಊಹೆಯಂತೆ ಅಕ್ಕ ಪಕ್ಕದ ಜನ ಗುಂಪುಗುಂಪಾಗಿ ಬರತೊಡಗಿದ್ದರು. ಅವರನ್ನು ಕಂಡ ಕಳ್ಳ ಕಕ್ಕಾಬಿಕ್ಕಿಯಾದ,ಏನೂ ತೋಚದಂತಾಗಿ ಅತ್ತ ಇತ್ತ ನೋಡುತ್ತ ಸರ ಸರನೆ ಮನೆಯ ಹಿಂದಿನ ತೆಂಗಿನ ಮರ ಏರತೊಡಗಿದ.
ಅದೇ ಮರದ ಮೇಲಿದ್ದ ಹನುಮ ಪಿಳಿ-ಪಿಳನೇ ನೋಡುತ್ತ ಅಲ್ಲೇ ಇದ್ದ ಒಂದು ಕಾಯಿ ಕಿತ್ತಿ, ಸರಿಯಾಗಿ ಕಳ್ಳನ ತಲೆ ಮೇಲೆ ಎತ್ತಿ ಹಾಕಿತು. ಅನಿರೀಕ್ಷಿತ ವಾಗಿ ಪೆಟ್ಟು ತಿಂದ ಕಳ್ಳ ನೋವು ಸಹಿಸದೇ”ಅಮ್ಮಾ.ಅಮ್ಮಾ ಎಂದು ಕಿರುಚುತ್ತ, ತೆಂಗಿನ ಬುಡಕ್ಕೆ ಬಂದು ಬಿದ್ದ. ಆತ ಕತ್ತೆತ್ತಿ ನೋಡಿದಾಗ ತನ್ನ ಸುತ್ತಲೂ ಜನ, ನಿಂತಿರುವುದು ಕಂಡು”ತಪ್ಪಾಯ್ತು,ಅಣ್ಣಾ….. ಹೊಡಿಬೇಡಿ”ಎಂದು ದೈನ್ಯದಿಂದ ಕೈ ಜೋಡಿಸುತ್ತ ತಾನು ಕದ್ದ ಹಣ, ಒಡವೆ ಎಲ್ಲವನ್ನೂ ಹಿಂತಿರುಗಿಸಿದ.ಅದಾಗಲೇ ಮರದಿಂದ ಸರ-ಸರನೆ ಇಳಿದು ಬಂದು ಬಸಮ್ಮ ನ ಬಳಿ ಕುಳಿತ “ಹನುಮ” ತನ್ನ ಮುಂದಿನ ಎರಡು ಕಾಲಿನ ಮೇಲೆ ನಿಂತು ಖುಷಿಯಿಂದ ಚಪ್ಪಾಳೆ ಹಾಕತೊಡಗಿತು.ಅಲ್ಲಿ ನೆರೆದ ಜನ ಈ ಹನುಮ ಮಾಡಿದ ಸಹಾಯವನ್ನು ಕಂಡು ಬಾಯ್ತುಂಬಾ ಕೊಂಡಾಡತೊಡಗಿದರು.