ಆನೆಯ ಸಹಾಯ
ಬಯಲು ಸೀಮೆಯಲ್ಲಿ ಪಥೇರ್ ಪಾಡ್ ಎಂಬ ಗುಡ್ಡ ಇತ್ತು.ಆ ಗುಡ್ಡದ ಕೆಳಗಿನ ಪ್ರದೇಶ ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿತ್ತು.ಅವುಗಳ ನಡುವೆ ಸದಾ ಕಾಲ ಜುಳು ಜುಳು ಎಂದು ಹರಿಯುವ ಪುಟ್ಟ ತೊರೆ ಇತ್ತು.ತೊರೆಯ ಎರೆಡೂ ಬದಿ ಸಾಕಷ್ಟು ಹಲಸು, ಮಾವು ಮತ್ತು ಸೀಬೆ ಮರಗಳಿದ್ದವು.ಆ ಬಂಡೆಯ ಸಂದುಗೊಂದುಗಳಲ್ಲಿ ಒಂದಿಷ್ಟು ಕರಡಿ ಕುಟುಂಬ, ಮೊಲ, ಮಂಗಗಳು ಬೇರೆ ಬೇರೆ ವಾಸಿಸುತ್ತಿದ್ದವು.ಹಗಲಿನ ವೇಳೆ ಅವು ತಮ್ಮ ತಮ್ಮ ಪರಿವಾರದೊಂದಿಗೆ ಹತ್ತಿರದಲ್ಲಿ ಸಿಗುವ ಆಹಾರ ತಿಂದು,ಸಂಜೆಯಾದ ನಂತರ ಮತ್ತೆ ವಾಸಸ್ಥಳಕ್ಕೆ ಮರುಳುತ್ತಿದ್ದವು.ಈ ಎಲ್ಲ ಪ್ರಾಣಿಗಳು ಪರಸ್ಪರ ಅನ್ಯೋನ್ಯ ವಾಗಿದ್ದವು.
ಹೀಗೆ ಒಂದು ದಿನ,ಮಂಗನ ಪರಿವಾರದ ನಾಲ್ಕೈದು ಸದಸ್ಯರು ಸೀಬೆ ಮರದ ಮೇಲೆ ಬಂದು ಕುಳಿತಾಗ, ಅಷ್ಟು ದೂರದಲ್ಲಿ ಒಂದಿಬ್ಬರು ದುರುಳರು ಹಸಿರು ಬಣ್ಣದ ದೊಡ್ಡ ಆಟೋ ವ್ಯಾನ್ ಬಳಿ ನಿಂತು ತಮ್ಮ ತಮ್ಮಲ್ಲೇ ಏನೋ ಪಿಸುಗುಡುತ್ತಿರುವುದನ್ನು ಕಂಡು,.ಅಪರೂಪಕ್ಕೆ ಮನುಷ್ಯರು ಇಲ್ಲಿಗೆ ಬಂದಿದ್ದಾರೆ ಎಂದರೆ ಏನೋ ಅಪಾಯ ಕಾಯ್ದಿದೆ ಎಂದು ಊಹಿಸಿ, ಕುತೂಹಲದಿಂದ ಮರದಿಂದ ಮರಕ್ಕೆ ಜಿಗಿಯುತ್ತ ಸದ್ದಿಲ್ಲದೇ ಅವರು ನಿಂತಿದ್ದ ಆಟೋ ವ್ಯಾನ ಪಕ್ಕ ಇದ್ದ ಹೊಂಗೆ ಮರದ ಮೇಲೆ ಬಂದು ಕುಳಿತು ಅವರಾಡುವ ಮಾತುಗಳನ್ನು ಆಲಿಸತೊಡಗಿದವು.
ಆ ದುರುಳರು ತಮ್ಮ ತಮ್ಮಲ್ಲಿ..”ನೋಡು..ಆ, ಸರ್ಕಸ್ ಕಂಪನಿಯ ಮನುಷ್ಯನಿಗೆ
ನಾವು ಮಾತು ಕೊಟ್ಟಂತೆ ಕರಡಿ ಮರಿಗಳನ್ನು ಹೊತ್ತೊಯ್ದು ಅವನಿಗೆ ಒಪ್ಪಿಸಲು ಇಂದೇ ಕೊನೆಯ ದಿನ.ನಾವೇನಾದರೂ ಇಂದು ಆ ರೀತಿ ಮಾಡದಿದ್ದರೆ ಆತ ನಮ್ಮನ್ನು ಜೀವ ಸಹಿತ ಉಳಿಯಲು ಬಿಡಲ್ಲ “ಎಂದು ಮಾತನಾಡಿಕೊಳ್ಳುತ್ತಿದ್ದರು.
ಅಷ್ಟರಲ್ಲಿ ಅವರ ಪೈಕಿ ಒಬ್ಬ -“ಏಯ್..ನೋಡಲ್ಲಿ ಆ ಕರಡಿ ಮರಿಗಳು ಮಾತ್ರ ಆಡುತ್ತಿವೆ..ಇದೇ ಸೂಕ್ತ ಸಮಯ “ಎಂದು ಮಾತು ನಿಲ್ಲಿಸಿ ,ಅವುಗಳನ್ನು ಹಿಡಿಯಲು ಬಲೆ ಸಮೇತ ಅಲ್ಲಿಗೆ ಹೋಗಿರುವುದನ್ನು ನೋಡಿದವು.ಮರು, ಕ್ಷಣವೇ,ಈ ವಿಷಯ ಆ ಮರಿಗಳ ಪೋಷಕರಿಗೆ ಹೋಗಿ ತಿಳಿಸಿ ಬರುವಷ್ಟರಲ್ಲಿ ಆ ದುರುಳರು ಎರಡೂ ಕರಡಿ ಮರಿ ಗಳನ್ನು ಹಿಡಿದು ಅವುಗಳ ಕೈಕಾಲು ಭದ್ರವಾಗಿ ಕಟ್ಟಿ, ಕಿರುಚಿದ್ದು ಕೇಳದೇ ಇರಲೆಂದು ಬಾಯಿಗೆ ಬಟ್ಟೆ ಕಟ್ಟಿ ವ್ಯಾನ್ ನೊಳಗೆ ಹಾಕಿಕೊಂಡು ಹೊರಟು ಹೋಗಿದ್ದರು.ಈ ವಿಷಯ ತಿಳಿದು ತಳಮಳಗೊಂಡು
ದುಃಖಿಸುತ್ತ,ಅವುಗಳ ಪೋಷಕರು ರೋದಿಸತೊಡಗಿದವು.ಆಗ ಹಿರಿಯ ಮಂಗ
ಅವುಗಳ ಬಳಿ ಬಂದು “ನೀವು ಹೀಗೆ ಅಳುತ್ತ ಕುಳಿತರೆ , ನಿಮ್ಮ ಮರಿಗಳು ವಾಪಸ್ ಬರುತ್ತವಾ? ಅದರ ಬದಲು ಏನಾದರೂ ಉಪಾಯ ಮಾಡೋಣ ತಡಿ..”ಎಂದು ಯೋಚನೆ ಮಾಡಿದ್ದೇ ತಡ,ಮರದಿಂದ ಮರಕ್ಕೆ ಜಿಗಿಯುತ್ತ ತನ್ನ ಆಪ್ತ ಮಿತ್ರ ಆನೆಯ ಬಳಿ ಬಂದು ಎಲ್ಲ ವಿಷಯ ವಿವರಿಸಿ ಹೇಗಾದರೂ ಸರಿ ಆ ಪುಟ್ಟ ಕರಡಿ ಮರಿ ಗಳು ಮತ್ತೆ ಅವುಗಳು ಪೋಷಕರೊಂದಿಗೆ ಸೇರುವಂತೆ ಸಹಾಯ ಮಾಡು “
ಎಂದು ಕೇಳಿಕೊಂಡಿತು.ಆಗ ಆನೆ”ತಾಳು.. ನನಗೆ ಗೊತ್ತಿರುವಂತೆ ,ಈ ಕಾಡಿನಿಂದ ನಾಡಿಗೆ ಹೋಗಲು ಒಂದೇ ದಾರಿ ಇದೆ, ಅದು ಬಿಟ್ಟು ಎಲ್ಲೂ ಅಡ್ಡಾದಿಡ್ಡಿ ಹೋಗಲು ಆಗಲ್ಲ.. ಅವರು ಇಲ್ಲೆ ಎಲ್ಲೋ ಬರುತ್ತಿರಬಹುದು… ನೀನು ಬಾ ನನ್ನೋಂದಿಗೆ”ಎಂದು ಅದನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಕಾಡಿನ ಮಧ್ಯೆ ನುಸುಳಿ ಒಂದು ಎತ್ತರ ದಿಬ್ಬದ ಮೇಲೆ ಬಂದು, ಮಂಗನನ್ನು ಇಳಿಸಿ”ನೀನು ಮರ ಏರಿ.. ಅವರು ಬರುತ್ತಿರುವುದು ತಿಳಿಸು, ಅಷ್ಟರಲ್ಲಿ ನಾನು ಐದಾರು ದೊಡ್ಡ ಮರ ಉರುಳಿಸಿ ತಂದು ಇಲ್ಲಿ ಇಟ್ಟುಕೊಳ್ಳುವೆ “ಎಂದು ಹೇಳಿತು.ಆನೆಯ ಮಾತಿಗೆ ಒಪ್ಪಿ ಮಂಗ ಮರ ,ಏರಿ ಅವರ ಬರುವನ್ನೇ ನೋಡತೊಡಗಿತು. ಅರ್ಧ ಗಂಟೆ ನಂತರ ದೂರದಿಂದ ಆ ದುರುಳರು ಬರುವುದನ್ನು ಕಂಡ,ಮಂಗ ಆನೆಯ ಬಳಿ ಬಂದು ವಿಷಯ ತಿಳಿಸಿತು. ಮೊದಲೇ ಸಿದ್ದಪಡಿಸಿಕೊಂಡಂತೆ ಆನೆ ಆ ದುರುಳರು ,ಆ ದಿಬ್ಬದ ಕೆಳಗೆ ಬರುತ್ತಲೇ ತನ್ನ ಕಾಲಿನ ಬಳಿ ಇಟ್ಟುಕೊಂಡಿದ್ದ ಐದಾರು ಮರಗಳನ್ನು ಒಂದರ ಹಿಂದೆ ಒಂದರಂತೆ ತಳ್ಳಿತು.ಅನಿರೀಕ್ಷಿತ ಘಟನೆಯಿಂದ ತತ್ತರಿಸಿ ಹೋದ ದುರುಳರು ಸಧ್ಯ ತಮ್ಮ ಜೀವ ಉಳಿದರೆ ಸಾಕು, ಎಂದುಕೊಂಡು
ಅಲ್ಲಿಂದ ದಿಕ್ಕಾಪಾಲಾಗಿ ಓಡಿದರು. ಆಗ ಬಳಿಕ ನಿಧಾನವಾಗಿ ಅಲ್ಲಿಗೆ ಬಂದ ಆನೆ ಹಾಗೂ ಮಂಗ ಎರಡೂ ಸೇರಿ ಹಗ್ಗದಿಂದ ಬಿಗಿದಿದ್ದ ಕರಡಿ ಮರಿ ಗಳನ್ನು ಮುಕ್ತ ಗೊಳಿಸಿದವು. ಸುಸ್ತಾಗಿದ್ದ ಆ ಮರಿಗಳನ್ನು ಆನೆ ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಅದರ ಪೋಷಕರ ಬಳಿ ಬಂದಿತು. ಅಷ್ಟರಲ್ಲಿ ಆ ಮಂಗ ಕೂಡ
ಮರದಿಂದ ಮರಕ್ಕೆ ಜಿಗಿಯುತ್ತ ಅಲ್ಲಿಗೆ ಬಂದಿತ್ತು.ಕಳೆದುಕೊಂಡಿದ್ದ ಮರಿಗಳನ್ನು ಕಂಡ ಅದರ ಪೋಷಕ ಕರಡಿಗಳು ಹರುಷದಿಂದ ಓಡಿ ಬಂದು ಮರಿಗಳನ್ನು ಅಪ್ಪಿಕೊಂಡವು.ಆ ಬಳಿಕ ತಮ್ಮ ಮರಿಗಳನ್ನು ವಾಪಸ್ ಕರೆತರಲು ಸಹಾಯ ಮಾಡಿದ ಆನೆಗೆ ಮತ್ತು ಮಂಗಗಳಿಗೆ ಧನ್ಯವಾದಗಳನ್ನು ಹೇಳಿ ಬಿಳ್ಕೊಟ್ಟವು.