Site icon Chandamama

ಗಿಣಿಯ ಜಾಣತನ

Parrot Photo by Aashutosh Sharma from Pexels: https://www.pexels.com/photo/two-green-parrots-1098254/
Reading Time: < 1 minute

ಗಿಣಿಯ ಜಾಣತನ

ಮುಸ್ಸಂಜೆಯ ಒಂದು ದಿನ,ಆಕಾಶದ ತುಂಬೆಲ್ಲ ಕರೀ ಮೋಡ ಕವಿದಿತ್ತು.ಮಳೆ,ಈಗಲೋ-ಆಗಲೋ ಬರುವಂತಿತ್ತು.ಈ ಸಮಯದಲ್ಲಿ ಅದೆಲ್ಲಿಂದಲೋ ಹಾರಿ ಬಂದು ಮರದ ಮೇಲೆ ಕುಳಿತ ಗಿಣಿಯೊಂದು ಹಸಿವಿನಿಂದ ಬಳಲಿ,ಚಳಿಯಿಂದ ನಡುಗತೊಡಗಿತು.ತಂಪಾದ ಗಾಳಿ ಬೀಸಿ ಬಂದಾಗ,ಅದು “ಫುರ್”ಎಂದು ಹಾರಿ ಎದುರಿಗಿದ್ದ ಅಂಗಡಿಯೊಳಕ್ಕೆ ನುಗ್ಗಿ,ಅಲ್ಲಿ

ಜೋಡಿಸಿಟ್ಟ ಮೂಟೆಗಳ ಸಂದಿಯೊಳಗೆ ಅವಿತುಕೊಂಡಿತು. ಹಗಲು ಸರಿದು ರಾತ್ರಿಯಾಯಿತು.ಅಂಗಡಿಯ ಬಾಗಿಲೂ ಮುಚ್ಚಿತು.ಒಳಗೆ ಮಾತ್ರ,ಒಂದು ಮಿಣಿ ಮಿಣಿ ದೀಪ ಉರಿಯುತ್ತಿತ್ತು. ಸ್ವಲ್ಪ ಸಮಯದ ಬಳಿಕ ಮೂಟೆಗಳ ಸಂದಿಯಲಿ ಅವಿತ ಆ ಗಿಣಿ ಮೆಲ್ಲಗೆ ಕುಪ್ಪಳಿಸುತ್ತ ಒಂದು ತುದಿಗೆ ಬಂದು,ತನ್ನ ಕತ್ತನ್ನು

ಮಾತ್ರ ಆಚೆ ತೂರಿ,ಅತ್ತ-ಇತ್ತ ನೋಡಿ,ಅಲ್ಲಿ ಯಾರು ಇಲ್ಲದಿರುವುದನು ಖಚಿತಪಡಿಸಿಕೊಂಡಿತು.ಇನ್ನೇಕೆ ತಡ,ಎಂದು ಅಂದುಕೊಳ್ಳುತ್ತ”ಫುರ್”ಎಂದು ಹಾರಿ ಬಂದು ನೆಲದ ಮೇಲೆ ಕುಳಿತು ಅಲ್ಲಲ್ಲಿ ಬಿದ್ದ ಕಾಳು-ಕಡಿ

ಹೆಕ್ಕಿ ತಿನ್ನತೊಡಗಿತು.ಅಷ್ಟರಲ್ಲಿ ಆ ಅಂಗಡಿಯ ಮುಂಬಾಗಿಲಿನ ಮೇಲ್ಭಾಗದಲ್ಲಿದ್ದ ಮಾಡಿನ ಮೂಲಕ ಗಡವ ಬೆಕ್ಕೊಂದು ನುಸುಳಿ ಬಂದಿತು.

ಒಂಟಿಯಾಗಿ ಕಾಳು ತಿನ್ನುತ್ತಿದ್ದ ಗಿಣಿಯ ಕಂಡು ಅದರ ಬಾಯಿತುಂಬ ನೀರುರಿತು.ಅದು ಮನದಲ್ಲೇ”ಆಹಾ..ಎಂಥಾ ಮುದ್ದಾದ ಗಿಣಿ,ತನಗೆ ಒಳ್ಳೆಯ ಆಹಾರವೇ ದಕ್ಕಿದೆ ಇದನ್ನು ಬಿಟ್ಟರೆ ನಾ ಕೆಟ್ಟೆ”ಎಂದು ಅಂದುಕೊಳ್ಳುತಿರುವಾಗ ಆ ಗಿಣಿಯ ಜೊತೆಗೆ ಕಾಳು ತಿನ್ನಲು ಎರಡು ಪುಟ್ಟ ಇಲಿಗಳೂ ಸೇರಿಕೊಂಡವು.ಒಂದು ಕಡೆ  ಮುದ್ದಾದ ಗಿಣಿ,ಮತ್ತೊಂದು ಕಡೆ ಪುಟ್ಟ ಇಲಿಗಳು.ಆಹ್ಹಾ..

ಬೆಕ್ಕಿಗಂತೂ ಖುಷಿಯೋ ಖುಷಿ.ಎರಡೂ ತನಗೆ

ಪ್ರಿಯವಾದ ಆಹಾರವೇ…ಆದರೆ ತಾನು ಯಾವುದನ್ನು ಕಬಳಿಸಬೇಕು ಎಂದು ಯೋಚಿಸುತ್ತ ಅದು ತಲೆ ಕೆರೆದುಕೊಳ್ಳಲು ಮುಂದಾದಾಗ ಅಕಸ್ಮಾತಾಗಿ ಅದರ ಮುಂದಿದ್ದ ಬಲಕಾಲು,ಪಕ್ಕದಲ್ಲಿದ್ದ  ಪುಟ್ಟ ಖಾಲಿ ಟಿನ್ ಡಬ್ಬಕ್ಕೆ ತಗುಲಿತು.ಮರುಕ್ಷಣವೇ ಆ ಡಬ್ಬ “ಢಬ್” ಎನ್ನುವ ಶಬ್ದದೊಂದಿಗೆ ನೆಲಕ್ಕೆ ಬಿದ್ದಿತು.

ಈ ಶಬ್ದ ಆಲಿಸಿದ ಇಲಿಗಳ ಕಿವಿ ನಿಮಿರಿ ನಿಂತವು.”ಓಹ್ಹೋ..ತಮಗೇನೋ ಆಪತ್ತು ಕಾದಿದೆ”ಎಂದರಿತ ಅವು ಸರಸರನೇ ಓಡಿ ಬಿಲ ಸೇರಿಕೊಂಡವು.ಒಂಟಿಯಾದ ಗಿಣಿ “ನಾನೇನಪ್ಪಾ ಮಾಡೋದು”ಎನ್ನುತ್ತ ತಲೆ ಎತ್ತಿ ನೋಡಿದಾಗ ಅದಕ್ಕೆ ಛಾವಣಿಯ ಕೊಕ್ಕೆಗೆ ನೇತಾಡತ್ತಿದ್ದ ಮೊಳುದ್ದದ ಹಗ್ಗ ಕಂಡಿತು.ತಡ ಮಾಡದೇ ಅದು”ಫುರ್”ಎಂದು ಹಾರಿಬಂದು ಅದರ ಮೇಲೆ ಕುಳಿತುಕೊಂಡು ಉಯ್ಯಾಲೆ ತರಹ ಜೀಕುತ,ಎದುರಿಗಿದ್ದ ಮಾಡಿನೊಳಗೆ ಕುಳಿತ ಬೆಕ್ಕಿಗೆ ಅಣಕಿಸುವ ರೀತಿ ಜೋರಾಗಿ ಕೂಗತೊಡಗಿತು.ಗಿಣಿಯ ಆಟದಿಂದ ರೋಷ ಗೊಂಡ ಆ ಗಡವ ಬೆಕ್ಕು”ತಾಳು ಬಂದೇ”ಎನ್ನುವ ರೀತಿ”ಛಂಗ್”ಎಂದು ರಭಸದಿಂದ ಹಗ್ಗದತ್ತ ಜಿಗಿದು ಗಿಣಿ ಹಿಡಿಯಲು ಮುಂದಾದಾಗ,ಅದು ಆಯತಪ್ಪಿ “ಧೊಪ್ಪ”ಎಂದು ನೆಲಕ್ಕೆ ಬಿದ್ದಿತು.ಇದನ್ನೇ ಕಾಯುತ್ತಿದ್ದ ಜಾಣ ಗಿಣಿ,ಬೆಕ್ಕು ನುಸುಳಿ ಬಂದ

ಮಾಡಿನ ಮೂಲಕ ಆಚೆ ಹಾರಿಹೋಗಿ ತನ್ನ ಪ್ರಾಣ ಉಳಿಸಿಕೊಂಡಿತು.ಇತ್ತ ತಾನು ಆಸೆ ಪಟ್ಟ ಯಾವ ಆಹಾರವೂ ದಕ್ಕಲಿಲ್ಲ ಎಂದು ದು:ಖಿಸುತ್ತ ಆ ಗಡವ ಬೆಕ್ಕು ಬಾಲ ಮುದುರಿಕೊಂಡು ಮೂಲೆಸೇರಿತು.

Exit mobile version