ಪ್ರಶಸ್ತಿ
ಪಾತೀ ಬೆಟ್ಟದ ಬುಡದಲ್ಲಿ ಗೆಜ್ಜೇ ಹಳ್ಳಿ ಎಂಬ ಕುಗ್ರಾಮ ಇತ್ತು.ಅಲ್ಲಿ ಕಾಳಪ್ಪನೆಂಬವನು ವಾಸಿಸುತ್ತಿದ್ದನು.ಆತ ಅನಕ್ಷರಸ್ಥ.ಜೀವನೋಪಾಯಕ್ಕೆ ಆತ ತನ್ನ ಪೂರ್ವಿಕರು ಮಾಡುತ್ತಿದ್ದ ಕಾರ್ಯ ಎಂದರೆ ಹತ್ತಿರದ ಕಾಡಲ್ಲಿ ಸಂಚರಿಸಿ ಹಾವು-ಉಡ ಮುಂತಾದವುಗಳನ್ನು ಹಿಡಿದು ಮಾರುವುದನ್ನು ಮುಂದುವರೆಸಿಕೊಂಡು
ಬರುತ್ತಿದ್ದ.ಆತನದು ಚಿಕ್ಕ ಸಂಸಾರ.ಹೆಂಡತಿ ಮತ್ತು ಒಬ್ಬನೇ ಒಬ್ಬ ಚಿಕ್ಕ ಮಗ ಇದ್ದರು.ದಿನ ನಿತ್ಯ ನಸುಕು ಹರಿಯುವ ಮುಂಚೆ ಕಾಳಪ್ಪ ದೊಡ್ಡ ಬ್ಯಾಗಿನಲ್ಲಿ ತರಹೆವಾರಿ ಡಬ್ಬಗಳನ್ನು ತುಂಬಿಕೊಂಡು ತನ್ನ ವೃತ್ತಿಗೆ ಹೋಗುತ್ತಿದ್ದ.ಅಲ್ಲಿ ದೊರೆತದ್ದವುಗಳನ್ನು ಮಾರಿ,
ಉಳಿದವುಗಳನ್ನು ಸಾಯಂಕಾಲ ತನ್ನ ಗುಡಿಸಿಲಿಗೆ ವಾಪಸ್ ತಂದು ಭದ್ರವಾಗಿಟ್ಟು ಮತ್ತೆ ಮರುದಿನ ಎಂದಿನಂತೆ ಅದೇ ಕಾರ್ಯಕ್ಕೆ ಹೋಗುತ್ತಿದ್ದ.
ದಿನಗಳು ಉರುಳಿದವು.ಕಾಳಪ್ಪನ ಮಗ ಈಗ ಹತ್ತಿದ ಶಾಲೆಗೆ ಹೋಗಲಾರಂಭಿಸಿದ.ಅಲ್ಲಿನ ಶಿಕ್ಷಕರು ಪಾಠದ ಜೊತೆಗೆ ಆಗಾಗ ಪರಿಸರ ರಕ್ಷಣೆ-ವನ್ಯ ಜೀವಿಗಳ ರಕ್ಷಣೆ ಕುರಿತು"ಯಾವುದೇ ಕಾರಣಕ್ಕೂ ಯಾವುದೇ ವನ್ಯ ಜೀವಿಗಳನ್ನು ಹಿಡಿದು ಕೂಡಿಟ್ಟು ಅವುಗಳಿಗೆ ಹಿಂಸೆ ಕೊಡುವುದು ಕಾನೂನಿನ ಬಾಹೀರ ಕೆಲಸ.ಅದನ್ನು ಉಲ್ಲಂಘನೆ ಮಾಡಿದವರಿಗೆ ಬರೀ ದಂಡ ಹಾಕುವುದಲ್ಲದೇ ಕಠಿಣ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ."ಎಂದು ಹೇಳುತ್ತಿದ್ದರು.
ಕಾಳಪ್ಪನ ಮಗ ಇಂತಹ ವಿಷಯಗಳನ್ನು ತುಂಬಾ ಗಮನವಿಟ್ಟು ಕೇಳುತ್ತಿದ್ದ.
ಒಂದು ದಿನ ಹೀಗೆ ಎಂದಿನಂತೆ-ಕಾಳಪ್ಪ ಮುಸ್ಸಂಜೆ ಸಮಯ ಕೆಲವು ಡಬ್ಬಗಳಲ್ಲಿ ಮಾರಾಟ ವಾಗದಿರುವ ಒಂದಿಷ್ಟು ಹಾವು-ಉಡ ತಂದಿಟ್ಟಿದ್ದ. ಇವುಗಳನ್ನು ಕಂಡ ಕಾಳಪ್ಪನ ಮಗ ಮನದಲ್ಲೇ" ಛೇ.. ತನ್ನ ತಂದೆ ಕಾನೂನಿನ ವಿರುದ್ಧದ ಕೆಲಸ ಮಾಡುತ್ತಿದ್ದಾರಲ್ಲ.."ಎಂದು ಅಂದು ಕೊಂಡವನು,. ಮರುದಿನ ಬೆಳಿಗ್ಗೆ ಕಾಳಪ್ಪ ಎದ್ದೇಳುವ ಮೊದಲೇ ಅವನು ಎದ್ದು, ಅಪ್ಪನಿಗೆ ಗೊತ್ತಾಗದಂತೆ ಅವೆಲ್ಲವುಗಳನ್ನು ತೆಗೆದುಕೊಂಡು ಹೋಗಿ ಹತ್ತಿರದ ಕಾಡಲ್ಲಿ ಬಿಡಲಾರಂಭಿಸಿದನು.
ದೂರದಿಂದಲೇ ಈ ದೃಶ್ಯ ವನ್ನು ಗಮನಿಸುತ್ತಿದ್ದ ಅಲ್ಲಿನ ವಲಯ ಅರಣ್ಯಾಧಿಕಾರಿ ಗಳು ಆ ಪೋರನ ಕೆಲಸ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿ”ಇನ್ನೂ ಮುಂದೆ ಇಂತಹ ಕಾನೂನಿನ ಬಾಹೀರ ಕೆಲಸವನ್ನು ತ್ಯಜಿಸುವಂತೆ ನಿನ್ನ ತಂದೆಗೆ ತಿಳಿಸು”ಎಂದು ಹೇಳಿದರು.
ಅದರಂತೆ ಆತ ಮನೆಗೆ ಬಂದವ, ಧೈರ್ಯದಿಂದ ತನ್ನ ಅಪ್ಪನಿಗೆ ಅರಣ್ಯ ಅಧಿಕಾರಿಗಳು ತಿಳಿಸಿದ ಮಾತುಗಳನ್ನು ಹೇಳಿದ.ಆದರೆ ಅದಕ್ಕೊಪ್ಪದ ಕಾಳಪ್ಪ,”ನಾನು ಅದರಿಂದಲೇ ಜೀವನ ಸಾಗಿಸುತ್ತಿದ್ದೇವೆ ಅದನ್ನು ಬಿಡುವುದು ಅಷ್ಟು ಸುಲಭವಲ್ಲ”ಎಂದು ವಿರೋಧ ವ್ಯಕ್ತಪಡಿಸುತ್ತ ವಾದ-ವಿವಾದ ಮಾಡತೊಡಗಿದ.ಅಷ್ಟರಲ್ಲಿ ಆತನ ಗುಡಿಸಿಲಿನೆದುರು ಅರಣ್ಯ ರಕ್ಷಣಾ ಇಲಾಖೆಯ ಅಧಿಕಾರಿಗಳು ಜೀಪಿನಿಂದ ಬಂದಿಳಿದು ಕಾಳಪ್ಪನನ್ನು ಕೂಗಿ, ಸಮಾಧಾನದಿಂದ
“ನೋಡು ಕಾಳಪ್ಪಾ.. ಇಷ್ಟು ದಿನ ನಿನಗರಿವಿಲ್ಲದೇ ಮಾಡಿಕೊಂಡು ಬರುತ್ತಿದ್ದ ಈ ನಿನ್ನ ಕೆಲಸ ಕಾನೂನಿನ ವಿರೋಧ ವಾಗಿದೆ.ನೀನು ಇದನ್ನೇ ಮುಂದುವರೆಸುವಂತೆ
ಎಂದು ಹಠ ಹಿಡಿದರೆ, ನಾನೂ ಸಹ ಕಾನೂನಿನಂತೆ ನಿನ್ನ ಮೇಲೆ ಕ್ರಮ
ತೆಗೆದುಕೊಳ್ಳಬೇಕಾಗುತ್ತದೆ.ಆಗ ನಿನ್ನಿಂದ ದಂಡ ವಸೂಲು ಮಾಡುವುದರ ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ…ಆಗ ನಿನ್ನ ಸಂಸಾರದ ಗತಿ ಏನು?
ಸ್ವಲ್ಪ ಯೋಚನೆ ಮಾಡು..”ಎಂದು ವಿವರಿಸಿದಾಗ,ಕಾಳಪ್ಪನಿಗೆ ಅರಿವು ಉಂಟಾಗಿ
ಪುನಃ ಅವರನ್ನೇ”ಸರೀ ಸ್ವಾಮಿ.. ಅದನ್ನು ಬಿಟ್ಟರೆ ಮುಂದೆ ನಾನು ಜೀವನ ಸಾಗಿಸುವುದಾದರೂ ಹೇಗೆ ನೀವೇ ಹೇಳಿ?”ಎಂದು ಪ್ರಶ್ನಿಸಿದ.ಆಗ ಆ ಅಧಿಕಾರಿಗಳು”ನಿನಗೆ ಮತ್ತು ನಿನ್ನ ಹೆಂಡತಿಗೆ ನಾವು ಬಿದಿರಿನ ಬುಟ್ಟಿ ಹೆಣೆಯುವ ಬಗ್ಗೆ ಉಚಿತವಾಗಿ ತರಬೇತಿ ಕೊಡಿಸುತ್ತೇವೆ.ತರಬೇತಿ ನಂತರ ಅದಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನೂ ಪೂರೈಸುತ್ತೇವೆ.ಇಷ್ಷೇ ಅಲ್ಲ ನೀನು ತಯಾರಿಸಿದ ಬಿದಿರಿನ ಬುಟ್ಟಿಗಳನ್ನು ನಾವೇ ಖರೀದಿಸಿ ಅದರ ಕೂಲಿ ಹಣ ನಿನ್ನ ಕೈ ಸೇರುವಂತೆ ನೋಡಿಕೊಳ್ಳುತ್ತೇವೆ.ಜೊತೆಗೆ ಪ್ರತಿ ತಿಂಗಳೂ ನಿನ್ನ ಸಂಸಾರಕ್ಕೆ ಬೇಕಾಗುವ ದವಸ-ಧಾನ್ಯ ಗಳನ್ನು ಮುಫತ್ತಾಗಿ ಸರ್ಕಾರದಿಂದ ಒದಗಿಸುವ ವ್ಯವಸ್ಥೆ ಕೂಡ ಮಾಡುತ್ತೇವೆ”-ಎಂದು ವಿವರಿಸಿದಾಗ ಕಾಳಪ್ಪ ತಾನು ಕುಳಿತ ಜಾಗದಿಂದ ಎದ್ದು ಬಂದು ಅವರ ಕಾಲಿಗೆ ನಮಸ್ಕರಿಸಿ”ಇನ್ನು ಮುಂದೆ ತನ್ನಿಂದ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುತ್ತೇವೆ” ಎಂದು ಪ್ರಮಾಣ ಮಾಡುತ್ತಾನೆ.
ಕೆಲ ದಿನಗಳ ನಂತರ ಆತನ ಮಗ ಓದುತ್ತಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ಅರಣ್ಯ, ರಕ್ಷಣಾಧಿಕಾರಿಗಳು ಕಾಳಪ್ಪ ಮಗನಿಗೆ ಪರಿಸರ ಮತ್ತು ವನ್ಯ ಜೀವಿಗಳ ರಕ್ಷಣೆಯಲ್ಲಿ
ವಿಶೇಷ ಕಾಳಜಿ ತೋರಿಸಿದ್ದಕ್ಕೆ ಸನ್ಮಾನಿಸಿ ಒಂದು ಪದಕ ಹಾಗೂ ಪ್ರಶಸ್ತಿ ಪತ್ರ ಕೂಡ ನೀಡುತ್ತಾರೆ.ಇದೆಲ್ಲವನ್ನು ನೋಡುತ್ತಿದ್ದ ಕಾಳಪ್ಪನಿಗೆ ತನ್ನ ಮಗನ ಬಗ್ಗೆ ಹೆಮ್ಮೆ ಉಂಟಾಗಿ ಆತನ ಕಣ್ಣು ತುಂಬಿ ಬರುತ್ತದೆ.