ಶಂಕರನ ಸಾಹಸ
ಶಿವಾರ ಪಟ್ಟಣದ ಧೀರಜ್ ಓರ್ವ ಶ್ರೀಮಂತ ಉದ್ಯಮಿ.ಆತನಿಗೆ ಅಲ್ಲೊಂದು ಮನೆ ಅಲ್ಲದೇ ಹತ್ತಿರದ ಸ್ವ ಗ್ರಾಮದಲ್ಲಿ ಹತ್ತಾರು ಎಕರೆ ತೋಟ, ಹಾಗೂ ಆ ತೋಟದ ನಡುವೆ ಚೆಂದಾದ ಮನೆಯೂ ಇತ್ತು.ಧೀರಜ್ ನ ಮಗ ಶಶಾಂಕ್ ಹತ್ತು ವರ್ಷದ ಪೋರ.ಆತ ಓದುತ್ತಿದ್ದ ಶಾಲೆಯಲ್ಲೇ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಾಲಪ್ಪ ಮಗ, ಶಂಕರ್ ಸಹ ಓದುತ್ತಿದ್ದ.
ಇಬ್ಬರೂ ಸಮ ವಯಸ್ಸಿನವರು.ಯಾವ ಭೇಧ ಭಾವಗಳಿಲ್ಲದೇ ಸದಾ ಜೊತೆಯಾಗಿ ಆಡುವುದು ಓದುವುದು ,ಬರೆಯುವುದು ಮಾಡುತ್ತಿದ್ದರು.ಬೆಳೆಯುವ ಮಕ್ಕಳ ಮನಸ್ಸು ಚನ್ನಾಗಿರಲೆಂದು ಯಾರು ಯಾವ ಕಾರಣಕ್ಕೂ ಅಡ್ಡಿ ಪಡಿಸುತ್ತಿರಲಿಲ್ಲ.ಮಗನಿಗೆ
ಶಾಲೆಯ ರಜಾ ಬಂದಾಗಲೆಲ್ಲ ಧೀರಜ್ ತನ್ನ ಕುಟುಂಬದವರೊಂದಿಗೆ ಸ್ವ ಗ್ರಾಮದಲ್ಲಿನ ತನ್ನ ತೋಟದ ಮನೆಗೆ ಬರುತ್ತಿದ್ದ.ಆಗ ಅವರೊಂದಿಗೆ ಶಂಕರ್ ನನ್ನೂ ತಪ್ಪದೇ ಕರೆತರುತ್ತಿದ್ದ.
ಧೀರಜ್ ನ ತೋಟದಲ್ಲಿರುವುದು ಒಂದು ಮಹಡಿಯ ಸುಂದರ ಮನೆಯಾಗಿತ್ತು. ಮನೆಯ ಒಳಗಿನಿಂದಲೇ ಮಹಡಿಗೆ ಏರಿ ಬರುವಂತೆ ಮೆಟ್ಟಿಲು ವ್ಯವಸ್ಥೆ ಇತ್ತು.
ಮೆಟ್ಟಿಲು ಏರಿ ಬರುತ್ತಿದ್ದಂತೆ ಬಾಲ್ಕನಿ ತರಹ ಪುಟ್ಟ ಜಾಗ, ಹಾಗೇ ಮುಂದೆ ದೊಡ್ಡ ಹಜಾರ, ಅದಕ್ಕೆ ಹೊಂದಿಕೊಂಡಂತೆ ಎರಡು ಕೋಣೆಗಳಿದ್ದವು.ಎಲ್ಲವೂ ಅಚ್ಚುಕಟ್ಟಾಗಿತ್ತು.ಶಶಾಂಕ್ ಮತ್ತು ಶಂಕರ್ ಇಬ್ಬರೂ ಅಲ್ಲಿಗೆ ಬಂದಾಗ ಹಗಲಿನ ಸಮಯದಲ್ಲಿ ತೋಟದ ತುಂಬಾ ಖುಷಿಯಿಂದ ಸುತ್ತಾಡಿ ಬರುತ್ತಿದ್ದರು.ಸಂಜೆ ಆಗುತ್ತಿದ್ದಂತೆ ಮನೆಯ ಒಳಬದಿ ಮೆಟ್ಟಿಲು ಗಳಿಗೆ ಹೊಂದಿಕೊಡಿದ್ದ ಬಾಲ್ಕನಿ ಯಲ್ಲಿ ಕುಳಿತು ಕೇರಂ,ಚೌಕಾಬಾರಾ,ಅಳಿಗುಳಿ ಮನೆಆಟ ಮುಂತಾದವುಗಳನ್ನು ಆಡುತ್ತಿದ್ದರು.
ಹೀಗೆ ಒಂದು ಬಾರಿ ರಜಾದಿನಗಳಲ್ಲಿ ಎಲ್ಲರು ಅಲ್ಲಿಗೆ ಬಂದ ಸಂದರ್ಭದಲ್ಲಿ, ,ಶಶಾಂಕ್ ನ ತಂದೆ ಮತ್ತು ತಾಯಿ ಇಬ್ಬರೂ ತುರ್ತಾದ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗ ಬೇಕಾಗಿ ಬಂದಿತು.ಅಂದು ಅವರು ಹೊರಡುವ ಮುನ್ನ “ನಾವು ಆದಷ್ಟು ಬೇಗ ವಾಪಸ್ ಬರುತ್ತೇವೆ,ಹುಷಾರಾಗಿರಿ..”ಎಂದು ಎಚ್ಚರಿಕೆ
ಮಾತು ಹೇಳಿ ಹೋಗಿದ್ದರು.ಎಂದಿನಂತೆ ಆ ಸಂಜೆ ಶಶಾಂಕ್ ಮತ್ತು ಶಂಕರ್ ಮನೆ ಒಳಗಿನ ಮೆಟ್ಟಿಲು ಪಕ್ಕ ಇದ್ದ ಬಾಲ್ಕನಿ ಯಂತಿರುವ ಜಾಗದಲ್ಲಿ ಕೇರಂ ಆಡುತ್ತ ಕುಳಿತಿದ್ದರು.ಸ್ವಲ್ಪ ಸಮಯದ ನಂತರ ಯಾರೋ “ಧಡ-ಧಡ”ಎಂದು ಬಾಗಿಲು ಬಡೆದ ಶಬ್ದ ವಾದಂತಾಯ್ತು.”ತಾಳು… ನಾನು ನೋಡಿ ಬರುವೆ..”ಎಂದು ಶಶಾಂಕ್, ಶಂಕರ್ ನಿಗೆ ಹೇಳಿ, ಮೆಟ್ಟಿಲಿಳಿದು ಬಂದು ಬಾಗಿಲು ತೆರೆದು ಇಣುಕುತ್ತಿದ್ದಂತೆ, ಕೈಯಲ್ಲಿ ದೊಣ್ಣೆ ಹಿಡಿದ ಇಬ್ಬರು ದಾಂಡಿಗರು ಆತನನ್ನು ಒಳಕ್ಕೆ ತಳ್ಳಿ ಬಿಟ್ಟರು.
ಆ ರಭಸಕ್ಕೆ ಆತ ಕೆಳಕ್ಕೆ ಬಿದ್ದು ಎಚ್ಚರ ತಪ್ಪಿದ.ಇದೆಲ್ಲವನ್ನೂ ಆ ಬಾಲ್ಕನಿಯ ಮೂಲೆಯಲ್ಲಿ ನಿಂತು ಸೂಕ್ಷ್ಮ ವಾಗಿ ನೋಡುತ್ತಿದ್ದ ಶಂಕರ್-ಓಹ್ಹೊ..ಈ ಖದೀಮರು
ಲೂಟಿಖೋರರೇ ಎಂದು ಖಚಿತ ಪಡಿಸಿಕೊಂಡು,ಸದ್ದಿಲ್ಲದೇ ಸರಸರನೆ ಮಹಡಿಯ ಹಜಾರದ ಪಕ್ಕ ಇದ್ದಂತಹ ಕೋಣೆ ಸೇರಿ ಒಳಗಿನಿಂದ ಬಾಗಿಲು ಭದ್ರಪಡಿಸಿ ಅಲ್ಲಿದ್ದ ದೊಡ್ಡ ಟೇಬಲ್ ಕಷ್ಟಪಟ್ಟು ಎಳೆದು ತಂದು ಬಾಗಿಲಿಗೆ ಅಡ್ಡ ನಿಲ್ಲಿಸಿದ.ಆನಂತರ
ಆ ರೂಮಿನಿಂದ ಒಳಗಿನಿಂದಲೇ ಮತ್ತೊಂದು ರೂಮಿಗೆ ಬಂದವ ಅಲ್ಲಿದ್ದ ಪುಟ್ಟ
ಬಾಲ್ಕನಿಯ ಕಟಾಂಜನಕ್ಕೆ ಎರಡು ಬೆಡ್ ಶೀಟ್ ಗಳನ್ನು ಜೋಡಿಸಿ ಕಟ್ಟಿ ಕೆಳಗೆ ಇಳಿ ಬಿಟ್ಟು ಅದರ ಮೂಲಕ ಕೆಳಗಿಳಿದು ಓಡಿ ಬಂದ.ಆ ಹೊತ್ತಿಗೆ ಮೇಲೆ ಬಂದ ಖದೀಮರು, ಶಂಕರ್ ಭದ್ರಪಡಿಸಿದ ರೂಮಿನ ಬಾಗಿಲು ತೆರೆಯುವ ಸಾಹಸ ಮಾಡತೊಡಗಿದ್ದರು.ಕೆಳಗೆ ಬಂದ ಶಂಕರ್,ಮುಂಬಾಗಿಲಿನ ಬಳಿ ಎಚ್ಚರ ತಪ್ಪಿ ಬಿದ್ದಿದ್ದ ತನ್ನ ಗೆಳೆಯನನ್ನು ಸದ್ದಿಲ್ಲದೇ ಹೊರಕ್ಕೆ ಎಳೆದು ತಂದು ಪುನಃ ಆ ಬಾಗಿಲನ್ನೂ ಹೊರಬದಿಯಿಂದ ಭದ್ರಪಡಿಸಿ, ಜೋರಾಗಿ”ಕಾಪಾಡೀ.. ಕಾಪಾಡಿ…ಕಳ್ಳರು ಬಂದಿದ್ದಾರೆ ಬನ್ನಿ..ಬನ್ನಿ..”ಎಂದು ಆತಂಕ ದಿಂದ ಬೊಬ್ಬೆ ಹಾಕತೊಡಗಿದ.ಈತನ ಬೊಬ್ಬೆ ಕೆಳಿಸಿಕೊಂಡ ಒಳಗಿದ್ದ ಕಳ್ಳರು ಕಂಗಾಲಾಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಲಗುಬಗೆಯಿಂದ ಮಹಡಿ ಮೆಟ್ಟಿಲು ಇಳಿದು ಬಂದರು.
ಆದರೆ ಅಲ್ಲೂ ಕೂಡ ಬಾಗಿಲನ್ನು ಹೊರಗಡೆಯಿಂದ ಭದ್ರ ಮಾಡಿರುವುದನ್ನು ಕಂಡು ಇನ್ನಷ್ಟು ಬೆವೆತು”ಆಯ್ತು ಇನ್ನು ತಮ್ಮ ಕಥೆ ಮುಗಿದಂತೆ..”ಎಂದು ಹೇಳಿಕೊಳ್ಳತೊಡಗಿದರು.ಇತ್ತ ಶಂಕರ್ ನ ಕೂಗು ಕೇಳಿಸಿಕೊಂಡ ತೋಟದ ಆಸುಪಾಸಿನಲ್ಲಿ ವಾಸವಾಗಿದ್ದರು ಓಡಿ ಬಂದು ವಿಷಯ ಅರಿತು,ಮೊಟ್ಟ ಮೊದಲು
ಶಶಾಂಕ್ ನಿಗೆ ನೀರು ಚುಮುಕಿಸಿ ಎಚ್ಚರ ವಾಗುವಂತೆ ಮಾಡಿದರು. ಮತ್ತೆ ಕೆಲವರು ಪೋಲೀಸ್ ರಿಗೆ ವಿಷಯ ತಲುಪಿಸಿದರು.ಅರ್ಧ ಘಂಟೆಒಳಗೆಲ್ಲ ಅಲ್ಲಿಗೆ ಬಂದ ಪೋಲೀಸ್ ನವರು ಮನೆಯೊಳಗಿದ್ದ ಕಳ್ಳರನ್ನು ಬಂಧಿಸಿ ಕರೆದೊಯ್ದರು.ಅಷ್ಟರಲ್ಲಿ
ಧೀರಜ್ ನ ಆಗಮನವಾಯ್ತು.ಆಗ ಅಲ್ಲಿದ್ದವರು ನಡೆದುದೆಲ್ಲವನ್ನು ಆತನಿಗೆ
ವಿವರಿಸಿದಾಗ ಧೀರಜ್, ಖುಷಿ ಪಟ್ಟು ,ಶಂಕರ್ ಮಾಡಿದ ಸಾಹಸ ಮೆಚ್ಚಿ, ಆತನನ್ನು ಬಿಗಿದಪ್ಪಿ ಕೊಂಡಾಡಿದ.