Site icon Chandamama

ಉಂಗುರದ ಮಹಿಮೆ

Forrest Photo by Robert Schrader from Pexels
Reading Time: 2 minutes

ಉಂಗುರದ ಮಹಿಮೆ

ಶಿಬಾರ ಗುಡ್ಡದ ಅಂಚಿನಲ್ಲಿ ,ನಾಣಯ್ಯನೆಂಬ ರೈತ  ವ್ಯವಸಾಯ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದ.ಆತನಿಗೆ ರಂಗ ಮತ್ತು ಗಂಗ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಸ್ವಭಾವದಲ್ಲಿ ರಂಗ ಚುರುಕು ಹಾಗೂ ಧೈರ್ಯವಂತನಾಗಿದ್ದ.ಗಂಗ ಮಾತ್ರ ಸ್ವಲ್ಪ ಮೆದು  ಹಾಗೂ ಪುಕ್ಕಲ ನಾಗಿದ್ದ.ಹದಿ ವಯಸ್ಸಿನ ಈ ಮಕ್ಕಳು ತಂದೆಯ ವ್ಯವಸಾಯ ಕಾರ್ಯ ದಲ್ಲಿ ಹಾಗೂ ಅಮ್ಮನಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದರು. ಒಲೆ ಹೊತ್ತಿಸಲು ಬೇಕಾಗುವಂತಹ ಉರುವಲು ಸಂಗ್ರಹಿಸಲು ಆಗಾಗ ಈ ಇಬ್ಬರೂ ಹತ್ತಿರದ ಕಾಡಿಗೆ ಹೋಗುತ್ತಿದ್ದರು.


ಹೀಗೆ ಒಂದು ಬಾರಿ ಮನೆಯಿಂದ ಬುತ್ತಿ ಕಟ್ಟಿಕೊಂಡು ಕಾಡಿಗೆ ಬಂದಿದ್ದರು.ಅಲ್ಲಿ-ಇಲ್ಲಿ ಸುತ್ತಾಡಿ, ಉರುವಲಿಗೆ ಬೇಕಿದ್ದ ಒಣ ಕಡ್ಡಿ ಮುಂತಾದವುಗಳನ್ನು ಸಂಗ್ರಹಿಸಿ ಎರಡು ದೊಡ್ಡ ಕಟ್ಟು ಸಿದ್ಧಪಡಿಸುವಷ್ಟರಲ್ಲಿ ಸುಸ್ತಾಗಿ ಹಸಿದಿದ್ದರು.ಹೀಗಾಗಿ ತಾವು ತಂದಿದ್ದ ಬುತ್ತಿ ಗಂಟಿನೊಂದಿಗೆ ಅಲ್ಲೇ ಹರಿಯುತ್ತಿದ್ದ ತೊರೆಯ ಬಳಿ ಹೋಗಿ ,ಊಟ ಪೂರೈಸಿ ವಾಪಸ್ ಬರುತ್ತಿದ್ದ ವೇಳೆ,ರಂಗ ಒಂದು ದಪ್ಪ ಗಾತ್ರದ ಕಲ್ಲಿಗೆ ಎಡವಿ ಬಿದ್ದು ಬಿಟ್ಟ.ಅವನು ಬಿದ್ದ ರಭಸಕ್ಕೆ ಆತನ ಕೈಯಲ್ಲಿ ಇದ್ದ ಸಣ್ಣ ಕುಡುಗೊಲು ನೆಲದ ಮೇಲೆ ಹರಿದು ಹೋಗುತ್ತಿದ್ದ ಬಸವನ ಹುಳುವಿನ ಮೇಲೆ ಬಿದ್ದು ಅದು ಎರಡು ತುಂಡಾಯಿತು.

ರಂಗ ತನ್ನ ಕುಡುಗೋಲು ಎತ್ತಿ ಕೊಳ್ಳಲು ಬಂದಾಗ,ತುಂಡಾಗಿದ್ದ ಆ ಬಸವನ ಹುಳುವಿನ ಜಾಗದಿಂದ ಸ್ವಲ್ಪ ಹೊಗೆ ಬಂದಂತಾಗಿ ಕೆಲ ನಿಮಿಷಗಳ ನಂತರ ವಾಮನಾಕೃತಿಯ ದೇವ ಧೂತನೊಬ್ಬ ಪ್ರತ್ಯಕ್ಷ ನಾದನು.ಆತನನ್ನು ಕಂಡ ರಂಗ ಒಂದು ಕ್ಷಣ ಅವಾಕ್ಕಾಗಿ ಅಲ್ಲಿಂದ ಓಡಲು ಶುರುಮಾಡಿದಾಗ ಆ ದೇವಧೂತ”ಏಯ್..ನಿಲ್ಲು ರಂಗಾ..ನಿಲ್ಲು ಓಡಬೇಡ, ನೀನು ನನಗೆ ಪುನರ್ಜನ್ಮ ನೀಡಿದ ಮಹಾನುಭಾವ, ನನ್ನ ಧನ್ಯವಾದಗಳನ್ನು ಸ್ವೀಕರಿಸು”ಎಂದ.ರಂಗನಿಗೆ ಆಶ್ಚರ್ಯವೋ ಆಶ್ಚರ್ಯ ,”ಅರ್ರೇ.. ನನ್ನ ಹೆಸರು ಇವನಿಗೆ ಹೇಗೆ ಗೊತ್ತಾಯಿತು..?”ಎಂದುಕೊಳ್ಳುತ್ತ  ಧೈರ್ಯದಿಂದ  ಮುಂದೆ ಬಂದು


“ನನಗೆ ಅರ್ಥ ವಾಗುವ ರೀತಿ ಹೇಳು”ಎಂದು ಕೇಳಿದನು. ಆಗ ದೇವಧೂತ

“ಹಲವು ವರ್ಷಗಳ ಹಿಂದೆ ಇದೇ ದಾರಿಯಲ್ಲಿ ನಾನು ಹೋಗುತ್ತಿದ್ದಾಗ ಓರ್ವ  ತ್ರಿಕಾಲ ಜ್ಞಾನಿ,ಮಹಾತಪಸ್ವಿ ಯನ್ನು ಅರಿಯದೇ ಅವಮಾನಿಸಿದ್ದೆ, ಅದಕ್ಕೆ ಪ್ರತಿಯಾಗಿ ಅವರು ಕೋಪಗೊಂಡು ನನ್ನನ್ನು ಬಸವನ ಹುಳುವಾಗಿ ಪರಿವರ್ತಿಸಿ

ಪಡಬಾರದ ಕಷ್ಟ ಪಡು, ಮುಂದೊಂದು ದಿನ ರಂಗ ನೆಂಬ ಬಾಲಕನಿಂದ ಹತನಾದ ಬಳಿಕ ಮತ್ತೆ ಮೊದಲಿನಂತೆ ರೂಪ/ಗುಣ/ಶಕ್ತಿ ಎಲ್ಲ ಪ್ರಾಪ್ರ ವಾಗುತ್ತದೆ ಎಂದು ಶಪಿಸಿದ್ದರು.ಈಗ ಆ ಕಾಲ ಕೂಡಿ ಬಂದಿದೆ, ದಯವಿಟ್ಟು ನನ್ನ ಧನ್ಯವಾದಗಳು ಸ್ವೀಕರಿಸು”ಎನ್ನುತ್ತ ಆತ ಅದೃಶ್ಯ ನಾಗುವ ಮುನ್ನ ರಂಗನ ಕೈಗೆ ಒಂದು ಪುಟ್ಟ ಉಂಗುರ ಕೊಡುತ್ತ”ನಿನಗೆ ಕಷ್ಟ ಒದಗಿ ಬಂದರೆ ಇದನ್ನು ನಿನ್ನ ಅಂಗೈಗೆ ಉಜ್ಜು

ಆಗ ನಾನು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುವೆ”ಎಂದು ಹೇಳಿ ಪುನಃ”ಹಾಂ..ರಂಗಾ..ಈ ಗುಟ್ಟು ನಿನ್ನಲ್ಲಿಯೇ ಇರುವಂತೆ ನೋಡಿಕೊ, ಒಂದು ವೇಳೆ ಯಾರಿಗಾದರೂ ಹೇಳಿದರೆ ಇದರ ಶಕ್ತಿ ಎಲ್ಲ ಮಾಯವಾಗುತ್ತದೆ.” ಎಂದು ಹೇಳಿ ಅದೃಶ್ಯನಾದ.ಇದಿಷ್ಟು ನಡೆಯುವುದರೊಳಗೆ ತನ್ನ ಪಾಡಿಗೆ ತಾನು ತಲೆ ತಗ್ಗಿಸಿಕೊಂಡು ಮುಂದೆ ಸಾಗುತ್ತಿದ್ದ ಗಂಗನನ್ನು ಒಬ್ಬ ಧಡೂತಿ ದೇಹದ ರಾಕ್ಷಸ ಹಿಡಿದು, ಆತ ಕಿರುಚದಿರಲೆಂದು ಆತನ ಬಾಯಿ ಗಟ್ಟಿಯಾಗಿ ಹಿಡಿದು ಬಿಟ್ಟ.

ಅಷ್ಟು ದೂರದಿಂದಲೇ ಇದನ್ನು ಗಮನಿಸಿದ ರಂಗ ಆಶ್ಚರ್ಯ ಪಡುತ್ತ ತನ್ನಷ್ಟಕ್ಕೆ ತಾನು”ಅಬ್ಬಾ… ಇದೆಂತಹ  ಅದ್ಭುತ ರಾಕ್ಷಸ.!ಅದರ ಆಕಾರದೆದೆರು ತಾನು ಏನೂ ಅಲ್ಲ.ಆದರೆ ತಮ್ಮನನ್ನು ಆತನ ಕೈಯಿಂದ ಬಿಡಿಸಿಕೊಳ್ಳುವ ಬಗೆ ಹೇಗೆ”ಎಂದು ಆಳವಾಗಿ ಯೋಚಿಸುತ್ತಿದ್ದಾಗ ಆ ದೇವಧೂತ ಕೊಟ್ಟ ಉಂಗುರ ಜ್ಞಾಪಿಸಿಕೊಂಡು ತಡ ಮಾಡದೆ ಅದನ್ನು ತನ್ನ ಅಂಗೈ ಗೆ ಉಜ್ಜಿಕೊಂಡ.ಕ್ಷಣಾರ್ಧದಲ್ಲಿ ಆ ದೇವಧೂತ ಒಂದು ಸೊಳ್ಳೆಯ ರೂಪದಲ್ಲಿ ಬಂದು ರಂಗನ ಕಿವಿಯೊಳಗೆ

“ಹೆದರ ಬೇಡಾ ರಂಗಾ ನೀನು ತಿಳಿದಂತೆ ಇವ ಬಲು ಅಪರೂಪದ ರಾಕ್ಷಸ..!ಆತನ ಜೀವ ಅವನ ಎಡಕಿವಿಯ ಕೆಳಗಿದೆ”ಎಂದು ಹೇಳುತ್ತಿದ್ದವನನ್ನು ತಡೆದ ರಂಗ “ಆದರೆ…..”ಎಂದು ಏನನ್ನೋ ಹೇಳ ಹೊರಟಾಗ ಸೊಳ್ಳೆರೂಪದ ದೇವಧೂತ ಪುನಃ ರಂಗನ ಕಿವಿಯಲ್ಲಿ ಪಿಸುಗುಟ್ಟಿ ಅಲ್ಲಿಂದ ಅದೃಶ್ಯ ನಾದ.ಅದಾದಾ ಕೆಲ ನಿಮಿಷಗಳ ನಂತರ ರಂಗ ಆ ರಾಕ್ಷಸನ ಬಳಿ ಓಡಿ ಬರುತ್ತ ಏರು ಸ್ವರದಲ್ಲಿ”ಏಯ್.. ಬಿಡು ನನ್ನ ತಮ್ಮನನ್ನು….”ಎಂದು ಕೂಗಲಾರಂಭಿಸಿದ.ಆ ರಾಕ್ಷಸನ ಕಣ್ಣು ಇವನತ್ತ ಬಿದ್ದಾಗ ಆತ “ಓಹ್ಹೋ… ನನಗೆ  ಇಂದು ಒಂದಲ್ಲ ಎರಡು ಆಹಾರ ದೊರೆತವು”ಎಂದು ಗಹಗಹಿಸಿ ನಗತೊಡಗಿತು.ರಂಗನನ್ನು ಹಿಡಿಯಲು ಮುಂದಾದಾಗ ಆತ”ಅಮ್ಮಾ….

ಮುಳ್ಳು.. ಅಯ್ಯೋ ಕಾಲಿಗೆ ಮುಳ್ಳು”ಎಂದು ಸುಮ್ಮ ಸುಮ್ಮನೆ ಬೊಬ್ಬೆ ಹಾಕತೊಡಗಿದ.ಆಗ ಆ ರಾಕ್ಷಸ  ರಂಗನ ಮುಂದೆ ಬಂದು “ತಾಳು ನಾನು ಅದನ್ನು ತೆಗೆದ ನಂತರ ನಿನ್ನನ್ನು ಎತ್ತಿಕೊಂಡು ಹೋಗುವೆ”ಎನ್ನುತ್ತ ಆತನೆದುರು ಬಗ್ಗಿ ನಿಂತಿತು.ಇದೇ ಸೂಕ್ತ ಸಮಯ ಎಂದರಿತ ರಂಗ, ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಆ ರಾಕ್ಷಸನ ಎಡಗಿವಿ ಕತ್ತರಸಿದ.ಆಗ ರಾಕ್ಷಸ ಇಡೀ ಕಾಡೇ ನಡುಗುವಂತೆ ಜೋರಾಗಿ ಕಿರುಚಿ ಪ್ರಾಣ ಬಿಟ್ಟಿತು.ಅದನ್ನು ಖಚಿತಪಡಿಸಿಕೊಂಡ ರಂಗ ಮನದಲ್ಲೇ ಆ ದೇವಧೂತನಿಗೆ ನಮಿಸಿ ತನ್ನ ತಮ್ಮನನ್ನು  ಮನೆಗೆ ಕರೆದೊಯ್ದನು.

Exit mobile version