ರಾಕ್ಷಸನ ಹುಟ್ಟಡಗಿಸಿದ ಬಾಲಕ
ಮರಲಾಪುರ ಎಂಬ ದೆಶವನ್ನು ಮಹೀಧರ ನೆಂಬ ರಾಜ ಆಳುತ್ತಿದ್ದನು. ಆತನ ನಾಡಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇತ್ತು.ಅವುಗಳ ರಕ್ಷಣೆಗೆಂದು ಭದ್ರವಾದ ಕೋಟೆ ಕೊತ್ತಲ ಕಟ್ಟಿಸಿದ್ದ.ಧನ- ಕನಕಗಳಿಂದಲೂ ಆತನ ರಾಜ್ಯ, ಸುಭೀಕ್ಷ ವಾಗಿದ್ದರೂ,ಪಕ್ಕದ ಕಾಡಿನಿಂದ ಆಗಾಗ ಅವನ ನಾಡಿಗೆ ಲಗ್ಗೆ ಇಡುತ್ತಿದ್ದ ಪಟಾಭಟ ನೆಂಬ ಮಹಾ ಕ್ರೂರ ರಾಕ್ಷಸನ ಉಪಟಳದಿಂದ ನೆಮ್ಮದಿ ಕಳೆದುಕೊಂಡಿದ್ದ. ವಿಕಾರ ರೂಪ,ಆಜಾನು ಬಾಹುಗಳುಳ್ಳ ಆ ರಾಕ್ಷಸ, ಒಮ್ಮೆ ಲಗ್ಗೆ ಇಟ್ಟರೆ ಸಾಕು, ಎದುರಿಗೆ ಬಂದ ಪ್ರಾಣಿ, ಪಕ್ಷೀ, ನರ ಮಾನವರನ್ನೂ ಕಬಳಿಸುತ್ತಿತ್ತು.ಇದು ಅಷ್ಟಕ್ಕೇ ತೃಪ್ತಿ ಪಡೆದೇ ಸುತ್ತ ಮುತ್ತ ಫಲ ಕೊಡುತ್ತಿದ್ದ ಮರ-ಗಿಡ ಗಳನ್ನು ಬುಡ ಸಮೇತ ಕಿತ್ತಿ ಅದರಲ್ಲಿನ ಕಾಯಿ, ಹಣ್ಣು ಕೊನೆಗೆ ಎಲೆ ಸಹಿತ ಗುಳುಂ ಮಾಡುತ್ತಿತ್ತು. ಆ ಊರಿನ ರಾಜ ರಾಕ್ಷಸನನ್ನು ಧ್ವಂಸಿಸಲು ಮಾಡಿದ ಉಪಾಯಗಳೇ ಇರಲಿಲ್ಲ.ಹೀಗಾಗಿ ಚಿಂತಿತನಾದವ ದಿನವೂ ತನ್ನ ಮಂತ್ರಿ ಹಾಗೂ ಸೇನಾಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಲೇ ಇದ್ದ.
ಹೀಗೆ ಒಂದು ದಿನ,ಆ ರಾಜ ಗಂಭೀರವಾಗಿ ಚರ್ಚೆ ಮಾಡುತ್ತಿರುವ ಸಮಯದಲ್ಲಿ
ಪಕ್ಕದ ಹಳ್ಳಿಯಿಂದ ಕಾಳನೆಂಬವನೊಬ್ಬ ತಾನು ,ರಾಕ್ಷಸನ ಕುರಿತು ಮಹಾರಾಜರಿಗೆ
ವಿಷಯ ತಿಳಿಸಬೇಕಾಗಿದೆ ಎಂದು ಹೇಳಿ ದ್ವಾರ ಪಾಲಕರ ಅನುಮತಿ ಪಡೆದು ಮಂತ್ರಿಯ ಬಳಿ ಬಂದನು.ಮಂತ್ರಿಯು ಆತನಿಗೆ ಮಾತನಾಡಲು ಅನುಮತಿಸಬೇಕೆಂದು ರಾಜನಿಗೆ ಕೋರಿದನು.ಮುಂದುವರೆದ ಕಾಳ…. ತಾನು
ಎರಡು ಮೂರು ದಿನಗಳಿಂದಲೂ ತನ್ನ ಪಕ್ಕದ ಜಮೀನಿನಲ್ಲಿದ್ದ ಮಾದಪ್ಪನು ಆ ರಾಕ್ಷಸನಿಗೆ ನಿತ್ಯ ನೀರು,ವಿಪುಲವಾದ ಆಹಾರ ಕೊಡುತ್ತಿರುವುದನ್ನು ಕಂಡಿರುವುದಾಗಿ ವಿನೀತ ವಾಗಿ ಹೇಳಿದನು.ಅಸಲಿಯಾಗಿ ಈ ಕಾಳನಿಗೂ ಮಾದಪ್ಪನಿಗೂ ಹಳೇ ವೈಷಮ್ಯ ಇತ್ತು.ಮಾದಪ್ಪ ದೈವೀ ಭಕ್ತ,ಸೀದಾ ಸಾದಾ ಮತ್ತು ಬೆವರು ಸುರಿಸಿ ದುಡಿಯುವ ರೈತನಾಗಿದ್ದ.ಮಡದಿ ಹಾಗೂ ಏಕೈಕ ಪುತ್ರನೊಂದಿಗೆ ಸುಖ ಜೀವನ ಸಾಗಿಸುತ್ತಿದ್ದ. ಈ ರಾಕ್ಷಸನ ನೆಪ ಒಡ್ಡಿ ಆತನಿಗೆ ರಾಜನಿಂದ ಕಠಿಣ ಶಿಕ್ಷೆ ಕೊಡಿಸಬೇಕೆಂಬ ಲೆಕ್ಕಾಚಾರ ಹಾಕಿಕೊಂಡು ಕಾಳ ಅಲ್ಲಿಗೆ ಬಂದಿದ್ದ.
ರಾಕ್ಷಸನ ವಿಚಾರವಾಗಿ ಮೊದಲೇ ಚಿಂತಿತನಾಗಿದ್ದ ರಾಜ,ಕಾಳನ ಮೂಲಕ ಮಾದಪ್ಪನ ವಿಷಯ ಅರಿತು, ಇನ್ನಷ್ಟು ಕುಪಿತನಾಗಿ,ಸೇನಾಧಿಕಾರಿಗೆ ಈಗಲೇ ಹೋಗಿ ಆತನನ್ನು ಬಂಧಿಸಿ ಎಳೆದು ತನ್ನೀ ಎಂದು ಆದೇಶಿಸಿದ.ಕೆಲವು ಘಂಟೆಗಳ ನಂತರ ಮಾದಪ್ಪನ ಮನೆಗೆ ಬಂದ ಸೈನಿಕರು ಆತನನ್ನು ಬಂಧಿಸಿದಾಗ ಆತ ತಾನೇನು ತಪ್ಪು ಮಾಡಿದೆ? ಯಾಕೆ ನನ್ನನ್ನು ಎಳೆದೊಯ್ಯುತಿರುವಿರಿ? ಎಂದು
ಪ್ರಶ್ನಿಸಿದಾಗಲೆಲ್ಲ ಬಾಸುಂಡೆ ಬರುವಂತೆ ಚಾಟಿಯಿಂದ ಏಟು ಕೊಡತೊಡಗಿದರು.ಅನಿರೀಕ್ಷಿತ ಆಘಾತದಿಂದ ಗಲಿಬಿಲಿ ಗೊಂಡ ಆತನ ಪತ್ನಿ ಹಾಗೂ ಪುತ್ರ ಎಷ್ಟೇ ಕಣ್ಣೀರಿಟ್ಟು ಕಾಲಿಗೆ ಬಿದ್ದು ಕೇಳಿದರೂ ಅವರ ಹೃದಯ ಕರಗಲಿಲ್ಲ.ರಾಜನ ಸೈನಿಕರು ಮಾದಪ್ಪನನ್ನು ಎಳೆದು ಕೊಂಡು ಹೋದ ನಂತರ ತಾಯಿ ಮಗ ಇಬ್ಬರಿಗೂ ದಿಕ್ಕೇ ತೋಚದಂತಾಯಿತು.ತಂದೆಯಂತೆ ದೈವೀ ಭಕ್ತ ನಾದ ಮಾದಪ್ಪನ ಪುತ್ರ, ಊರಾಚೆಯ ಶಿವನ ದೇವಾಲಯದ ಎದುರು ಅನ್ನ- ಆಹಾರ ಗಳಿಲ್ಲದೇ ತನಗೆ ಸಹಾಯ ಮಾಡುವಂತೆ ನಿರಂತರವಾಗಿ ಭಕ್ತಿಯಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ.ಇದೇ ರೀತಿ ಎರಡು ದಿನ ಕಳೆದ ನಂತರ ಒಂದು ಬೆಳಗಿನ ಜಾವ ಆ ಭಗವಂತ ಪ್ರತ್ಯಕ್ಷನಾದಾಗ ಆ ಪೋರನ ಬಾಯಿಯಿಂದ ಮಾತೇ ಹೊರಡಲಿಲ್ಲ.
ಸೃಷ್ಟಿಯ ಸಕಲ ಆಗು ಹೋಗು ಗಳನ್ನು ಅರಿತು ಪರಮಾತ್ಮ “ದು:ಖಿಸ ಬೇಡ ಮಗು” ಎನ್ನುತ್ತ ಆತನ ಕೈಗೊಂದು ಗಿಣಿ ಕೊಟ್ಟು ಇದು ನಿನ್ನ ಸಕಲ ಸಮಸ್ಯೆ ಗಳನ್ನೂ ಪರಿಹರಿಸುತ್ತದೆ”ಎಂದು ಹೇಳಿ ಮಾಯವಾದ.ಆ ಗಿಣಿಯನ್ನು ನೋಡುತ್ತ ಆ ಬಾಲಕ ಇಷ್ಟು ಪುಟ್ಟ ಗಿಣಿ ನನಗೆ ಹೇಗೆ ಸಹಾಯ ಮಾಡೀತು ಎಂದು ಅಂದು ಕೊಳ್ಳುತ್ತಿದ್ದಂತೆ ಆ ಗಿಣಿ ಅವನತ್ತ ತಿರುಗಿ”ಮಗೂ, ನೀನೇನು ಚಿಂತಿಸಿ ಬೇಡ ನಾನು ದೆವ ಲೋಕದ ಗಿಣಿ, ನಿನ್ನ ಎಲ್ಲ ಸಮಸ್ಯೆ ಗಳನ್ನೂ ಬಗೆಹರಿಸಿದ ನಂತರವೇ ನಾನು ಇಲ್ಲಿಂದ ಮರಳುವುದು, ನಾನು ಹೇಳಿದಂತೆ ನೀನು ನಡೆದುಕೊಂಡರೆ ಸಾಕು”ಎಂದು ಭರವಸೆ ನೀಡಿತು.ಆಗ ಬಾಲಕನಿಗೆ ಉಡುಗಿಹೋದ ಧೈರ್ಯ ಮತ್ತೆ ಮೂಡಿದಂತಾಯಿತು. ಆತ ಗಿಣಿಯೊಂದಿಗೆ ಮನೆಯತ್ತ ವಾಪಸ್ ಬರುವ ದಾರಿಯಲ್ಲಿ ಇಡೀ ಕಾಡೇ ನಡುಗುವಂತೆ ಹೆಜ್ಜೆ ಇಡುತ್ತ ರಾಕ್ಷಸ ಲಗ್ಗೆ ಇಡಲು
ಬರುತ್ತಿದ್ದಾನೆಂದು ಅರಿವಾಯಿತು.ಜೊತೆಗೆ ಭಯವೂ ಆರಂಭವಾಯಿತು.ಬಾಲಕನ
ಸ್ಥಿತಿ ಕಂಡ ಗಿಣಿ,” ಮಗೂ… ನಾನಿದ್ದೇನೆ ಹೆದರಬೇಡ ಎಂದು ಮನವರಿಕೆ ಮಾಡತೊಡಗಿತು.ದೂರದಿಂದಲೇ ಗಿಣಿಯೊಂದಿಗೆ ಬಾಲಕನನ್ನು ಕಂಡ ರಾಕ್ಷಸ,
ತನ್ನ ಕರ್ಕಶ ಸ್ವರದಲ್ಲಿ-“ಎಲೌ..ಕುನ್ನೀ ನಾನಾರೆಂದು ತಿಳಿದೂ ಸಹ ಉದ್ದಟತನ
ತೋರುತ್ತಿರುವೆಯಲ್ಲಾ…, ನಾನು ಒಂದು ಬಾರಿ ಉಫ್ ಎಂದು ಉರಿದರೆ ಸಾಕು
ಅದೆಲ್ಲಿ ಹೋಗಿ ಬೀಳುವೆಯೋ ನಾ ಕಾಣೆ..”ಎಂದು ಕೂಗು ಹಾಕಿತು.ಆಗ ಬಾಲಕನ ಕೈ ಯಲ್ಲಿದ್ದ ಗಿಣಿ ಮೆಲ್ಲಗೆ ಆಯ್ತು ಹಾಗೇ ಮಾಡು ಎಂದು ಹೇಳು ಎಂದು ಪಿಸುಗುಟ್ಟಿತು.ಆಗ ಆ ಬಾಲಕ ಧೈರ್ಯ ದಿಂದ “ಊದು ನೋಡೋಣಾ”ಎಂದ.
ಅದನ್ನು ಕೇಳಿಸಿಕೊಂಡಿದ್ದೇ ತಡ, ರಾಕ್ಷಸ ಉಫ್ ಎಂದು ಊದಿತು.ಯಾವ ಬದಲಾವಣೆಯೂ ಆಗಲಿಲ್ಲ.ಸ್ವಲ್ಪ ಕೋಪಗೊಂಡ ರಾಕ್ಷಸ ಈ ಬಾರಿ ಮೊದಲಿಗಿಂತ
ಮೂರರಷ್ಟು ಜೋರಾಗಿ ಊದಿತು.ಆಗಲೂ ಯಾವ ಪ್ರಯೋಜನ ವಾಗಲಿಲ್ಲ. ಈಗ ರಾಕ್ಷಸನ ಪಿತ್ತ ನೆತ್ತಿಗೆರಿತು .ಇನ್ನೂ ಹತ್ತಿರ ಬಂದ ಅದು ತನ್ನ ಉದ್ದನೇಯ ಕೈ ಗಳಿಂದ ಇಬ್ಬರನ್ನೂ ಹೊಸಕಿ ಹಾಕಲು ಪ್ರಯತ್ನಿಸಿತು.ಊಹೂಂ…ಯಾರಿಗೂ ಏನೂ ಆಗಲಿಲ್ಲ ಬದಲಿಗೆ ರಾಕ್ಷಸನ ಹರಿತವಾದ ಉಗುರುಗಳೆ ಅದಕ್ಕೇ ಚುಚ್ಚಿ ಗಾಯವಾಯಿತು.ತನ್ನ ಯತ್ನಗಳು ವಿಫಲವಾದಾಗ ಅದು ಇನ್ನೂ ರೌದ್ರಾವತಾರ ತಾಳಿ, ಅವರಿಬ್ಬರ ಬಳಿ ಬಂದು ತನ್ನ ಬಲಿಷ್ಠ ಕಾಲುಗಳಿಂದ ತುಳಿಯಲು ಕಾಲೆತ್ತಿತು ಆದರೆ ಅದು ಎತ್ತಿದ ಕಾಲು ಕೆಳಗೆ ಇಳಿಯಲೇ ಇಲ್ಲ.ಆಗ ಬಾಲಕ -“ಎಲೌ ಪಾಪೀ.. ನಿನಗೆ ತಾಕತ್ತಿದ್ದರೆ ಮುಟ್ಟಿ ನೋಡು..” ಎಂದು ಸವಾಲು ಹಾಕಿದ.ನನಗೇ ಸವಾಲಾ? …
ತಾಳು ಬಂದೇ ಎಂದು ಅದು ಹತ್ತಿರ ಬರುತ್ತಿದ್ದಂತೆ ಗಿಣಿ ಹಾಗೂ ಬಾಲಕ ಇಬ್ಬರೂ ಆಕಾಶ ತಲುಪುವಷ್ಟು ಎತ್ತರ ಕೆ ಬೆಳೆಯ ತೊಡಗಿದರು.ಆಗ ಇವರೀರ್ವರ ಮುಂದೆ ಆ ರಾಕ್ಷಸ ಇರುವೆ ತರಹ ಕಂಡಿತು.ಇದೇ ಸಮಯ ನೋಡಿ ಗಿಣಿ ತನ್ನ ಕೊಕ್ಕಿನಿಂದ ಚುಚ್ಚಿ ಚುಚ್ಚಿ ಕಾಲಿನಿಂದ ತುಳಿದು ಅದರ ಮೂಳೆ ಪುಡಿ ಪುಡಿ ಮಾಡಿ ಬಿಟ್ಟಿತು. ಆ ನಂತರ ಗಿಣಿ ಬಾಲಕನನ್ನು ರಾಜನ ಬಳಿ ಕರೆದೊಯ್ದು,ತನ್ನ ನಿಜ ರೂಪ ತೋರಿಸಿ”ಮಹಾರಾಜಾ ಇನ್ನು ನೀನು ನೆಮ್ಮದಿ ಇಂದ ಇರು, ನಿಮ್ಮೆಲ್ಲರ ತಲೆನೋವಾಗಿದ್ದ ರಾಕ್ಷಸನ ಸಂಹಾರ ಮಾಡಲಾಗಿದೆ.
ಇದನ್ನು ಧೃಡೀ ಪಡಿಸಿಕೊಳ್ಳಬೇಕೆಂದರೆ ಆ ರಾಕ್ಷಸನ ಛಿದ್ರಗೊಂಡ ದೇಹ ಬೆಟ್ಟದ ಬುಡದಲ್ಲಿದೆ, ಇದಕ್ಕೆಲ್ಲ ಮುಖ್ಯ ಕಾರಣ ಈ ಬಾಲಕ ಎಂದು ಹೇಳಿದಾಗ ರಾಜನು ನೆಮ್ಮದಿ ಉಸಿರು ಬಿಡುತ್ತಾ ಗಿಣಿ ರೂಪದಲ್ಲಿ ಬಂದಿದ್ದ ದೇವಪುರುಷನನ್ನು ಭಕ್ತಿ ಯಿಂದ ನೇಮಿಸಿ,ಮಾದಪ್ಪನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿದ ಕಾಳನನ್ನು ಬಂಧಿಸಿ ಕಾರಾಗ್ರಹಕ್ಕೆ ತಳ್ಳಿದನು.ಆನಂತರ ಮಾದಪ್ಪನಿಗೆ ಹಾಗೂ ಆತನ ಪುತ್ರನಿಗೆ ಸೇರಿಸಿ ಸಕಲ ರಾಜ ಮರ್ಯಾದೆ ಮಾಡಿ ಸೂಕ್ತ ಬಹುಮಾನ ಕೊಟ್ಟು ಬೀಳ್ಕೊಟ್ಟನು.