ಮಧುರಪುರ ಎಂಬ ದೇಶದಲ್ಲಿ ಧರ್ಮಿಷ್ಠ ನೆಂಬ ರಾಜನಿದ್ದನು.ಆತನಿಗೊಬ್ಬ ಬುದ್ಧಿವಂತ, ಚತುರ,ಸುವಿಚಾರಿ, ಪರೋಪಕಾರಿ ಮಂತ್ರಿ ಇದ್ದನು.ಧರ್ಮಿಷ್ಠ ರಾಜನ ದೇಶ ಧನ-ಕನಕ ಗಳಿಂದ ಸಮೃದ್ಧವಾಗಿತ್ತು.ಇದರಿಂದಾಗಿ ಪ್ರಜೆಗಳೆಲ್ಲ ಸಂತಸದಿಂದಿದ್ದರು.ಹೀಗಿರುವಾಗ ಆ ರಾಜನ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಓರ್ವ ಸೈನಿಕ ತನಗೆ ಆಗದ ವ್ಯಕ್ತಿಯ ಮೇಲೆ ಹಗೆ ತೀರಿಸಿಕೊಳ್ಳಲು ಯೋಚಿಸಿದ.
ಅಂತೆಯೇ ಆತನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ, ಅದನ್ನು ನಂಬುವ ರೀತಿ ಕೆಲವು ಸುಳ್ಳು ಸಾಕ್ಷಿ, ದಾಖಲಾತಿಗಳನ್ನು ಸೃಷ್ಠಿಸಿ ಆತನನ್ನು ರಾಜನ ಎದುರು ತಂದು ನಿಲ್ಲಿಸಿದ.ದೇಶ ದ್ರೋಹ,ದುರ್ನಡತೆ, ವೈರಿಗಳೊಂದಿಗೆ ಪಿತೂರಿ ಹೀಗೆ ಹಲವು ಆಪಾದನೆ ಕುರಿತು ಆ ಸೈನಿಕ ನೀಡಿದ ದಾಖಲಾತಿ, ಸಾಕ್ಷಿ ಗಳನ್ನು ನಂಬಿದ ರಾಜ, ಕೋಪೋದ್ರಿಕ್ತನಾಗಿ ಆ ವ್ಯಕ್ತಿ ಗೆ ಗಲ್ಲು ಶಿಕ್ಷೆ ಕೊಡುವಂತೆ ಆದೇಶಿಸಿ ಆತನನ್ನು ಕಾರಾಗ್ರಕ್ಕೆ ಅಟ್ಟಿದ.
ಆದರೆ ರಾಜನು ತರಾತುರಿಯಾಗಿ ಕೈ ಕೊಂಡ ನಿರ್ಧಾರ ಅವನ ಮಂತ್ರಿಗೆ ಹಿಡಿಸದಾಯ್ತು.ಜೊತೆಗೆ ಇದರಲ್ಲೆನೋ ಆ ಸೈನಿಕನ ಕೈ ವಾಡ ಇದೆ ಎಂಬ ದಟ್ಟವಾದ ಅನುಮಾನ ಕಾಡಲಾರಂಭಿಸಿತು.ಹಾಗಂತ ಈ ವಿಷಯ ರಾಜನಿಗೆ ಹೇಳಿ ರಾಜಾಜ್ಞಿಯನ್ನು ಹಿಂಪಡೆಯುವಂತೆ ಹೇಳಲೂ ಧೈರ್ಯ ಸಾಲದಾಯಿತು.
ಮರುದಿನ ನಸುಕಿನಲ್ಲಿ ಆ ವ್ಯಕ್ತಿಗೆ ಗಲ್ಲಿಗೆ ಹಾಕುತ್ತಾರೆಂಬ ವಿಷಯ ತಿಳಿದ ಮಂತ್ರಿ,ಆ ರಾತ್ರಿ ಕಾರಾಗೃಹಕ್ಕೆ ಭೇಟಿ ನೀಡಿ ,ಆಪಾದನೆ ಹೊತ್ತ ವ್ಯಕ್ತಿಯ ಅಳಲನ್ನು ಪೂರ್ತಿ ಆಲಿಸಿ, ಕೊನೆಯಲ್ಲಿ ಆತನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿ ಬಂದ.ರಾತ್ರಿ ಕಳೆದು ನಸುಕು ಹರಿಯುವ ಮುನ್ನ ಆ ವ್ಯಕ್ತಿಗೆ ಗಲ್ಲು ಶಿಕ್ಷೆಗೆ ಸಿದ್ಧತೆ ಮಾಡುತ್ತಿರುವ ಸಮಯದಲ್ಲಿ ರಾಜನ ಆಗಮನವಾಯ್ತು.
ಆಗ ರಾಜನು ಆ ವ್ಯಕ್ತಿಗೆ “ಎಲೌ… ದೇಶದ್ರೋಹಿ ನಿನ್ನ ಕೊನೆಯ ಆಸೆ ಏನು?”ಎಂದು ಪ್ರಶ್ನಿಸಿದ.ಅದಕ್ಕೆ ಆ ವ್ಯಕ್ತಿ ವಿನೀತನಾಗಿ”ಮಹಾರಾಜ ತಾವು ನನ್ನ ಕೊನೆಯ ಆಸೆ ಈಡೇರಿಸಿ ಕೊಡುವುದಾಗಿ ಪ್ರಮಾಣ ಮಾಡಿದಲ್ಲಿ ಮಾತ್ರ ಅದನ್ನು ಹೇಳುವೆ”ಎಂದ “ಆಯ್ತುಖಂಡಿತವಾಗಿಯೂ ನಡೆಸಿಕೊಡುವೆ”ಎಂದು ರಾಜು ಪ್ರಮಾಣ ಮಾಡಿ ಹೇಳಿದ.ಮುಂದುವರೆದ ಆ ವ್ಯಕ್ತಿ-“ಮಹಾರಾಜರೆ… ನನಗೆ ಗಲ್ಲು ಶಿಕ್ಷೆ ಕೊಡಿ ಬೇಡ ಅನ್ನಲ್ಲ.. ಆದರೆ ಅದನ್ನು ತಾವು ಮರಣಿಸಿದ ದಿನ ವಿಧಿಸಿ..ಇದೇ ನನ್ನ ಕೊನೆಯ ಆಸೆ”ಎಂದು ತಿಳಿಸಿದ.
ಆತನ ಮಾತು ಕೇಳಿಸಿಕೊಂಡ ರಾಜ, ಒಂದು ಕ್ಷಣ ತಬ್ಬಿಬ್ಬಾಗಿ ನಿಂತು ಬಿಟ್ಟ.ಆತನಿಗೆ ಆಗಲೇ ಮಾತು ಕೊಟ್ಟಾಗಿದೆ ಇನ್ನೇನೂ ಮಾಡಲು ಸಾಧ್ಯವಾಗದ ವಿಷಯ ಎಂದರಿತ ರಾಜ”ಹಾಗೇ ಆಗಲಿ”ಎಂದು ಆದೇಶಿಸಿದ. ಇದನ್ನು ಆಲಿಸುತ್ತ ರಾಜನ ಪಕ್ಕದಲ್ಲಿ ಕುಳಿತ ಮಂತ್ರಿ ಮನದಲ್ಲಿ ತನ್ನ ಪ್ರಯತ್ನ ಫಲ ನೀಡಿತು ಎಂದು ಖುಷಿ ಪಟ್ಟ.ಮುಂದಿನ ದಿನಗಳಲ್ಲಿ ಆ ಸೈನಿಕ ತನ್ನ ವೈಯಕ್ತಿಕ ಹಗೆತನ ತೀರಿಸಿಕೊಳ್ಳಲು ಮಾಡಿದ ಯೋಜನೆ ಎಂದು ಬಟಾಬಯಲಾಯಿತು.
ಈ ವಿಷಯ ರಾಜನ ಗಮನಕ್ಕೆ ಬಂದಾಗ ಶಿಕ್ಷೆ ಗೆ ಒಳಪಡಿಸಿದ ವ್ಯಕ್ತಿಯನ್ನು ಬಿಡುಗಡೆ ಮಾಡಿ,ಆ ಕುಟಿಲ ಬುದ್ಧಿಯ ಸೈನಿಕ ಮತ್ತು ಆತನೊಂದಿಗೆ ಶಾಮೀಲಾದವರಿಗೆಲ್ಲ ಜೀವಿತಾವಧಿಯ ವರೆಗೆ ಉಗ್ರ ಶಿಕ್ಷೆ ವಿಧಿಸುವಂತೆ ರಾಜಾಜ್ಞೆ ಮಾಡಿದ.ಈ ರೀತಿ ಆ ಮಂತ್ರಿಯ ಚತುರೋಪಾಯದಿಂದ ಅಮಾಯಕ ವ್ಯಕ್ತಿಗೆ ನ್ಯಾಯ ದೊರೆಯುವಂತಾಯಿತು.