ಮಾಯಾ ಬೀಸಣಿಕೆ
ಬಹಳ ದಿನಗಳ ಬಳಿಕ ಅಜ್ಜಿ ಊರಿನಿಂದ ಬಂದಿದ್ದರು.ಆ ಸಂಜೆ ಅವರನ್ನು ಸುತ್ತುವರೆದ ಚಿಳ್ಳಾಪಿಳ್ಳಿಗಳು ಒಂದೇ ಸಮ”ಅಜ್ಜೀ..ತಮಾಷೆಯಾಗಿರೊ ಕಥೆ ಹೇಳಿ ಪ್ಲೀಸ್.. ಪ್ಲೀಸ್”ಎಂದು ದುಂಬಾಲು ಬಿದ್ದಿದ್ದವು.ಆಗ ಅಜ್ಜಿ” ಸ್ವಲ್ಪ ತಾಳ್ರೋ.. ನಾನು ಯೋಚನೆ ಮಾಡ್ಬೇಕು”ಎಂದು ಹೇಳಿ ಐದಾರು ನಿಮಿಷಗಳ ನಂತರ “ಯಾರೂ ಗಲಾಟೆ ಮಾಡಕೂಡದು..”ಎಂದು ಹೇಳಿ ಕಥೆ ಶುರು ಮಾಡಿದರು.
“ಕೆಲವು ವರ್ಷಗಳ ಹಿಂದೆ ಪಾತೀಪುರ ಎಂಬ ಪಟ್ಟಣದಲ್ಲಿ ಓರ್ವ ಭಿಕ್ಷುಕನಿದ್ದನಂತೆ.ದಿನ ನಿತ್ಯವೂ ಆತ ಅಲ್ಲಿ ಇಲ್ಲಿ ತಿರುಗಿ ಭಿಕ್ಷೆ ಬೇಡಿ ಜೀವಿಸುತ್ತಿದ್ದ.
ಒಂದು ದಿನ ಆತ ಎಷ್ಟೇ ತಿರುಗಿದರೂ ಎಲ್ಲೂ ಭಿಕ್ಷೆ ಸಿಗಲಿಲ್ಲವಂತೆ,ಆಗ ಮಟ ಮಟ ಮಧ್ಯಾಹ್ನ,ಆತ ಅಲೆದು ಅಲೆದು ಸುಸ್ತಾಗಿ ದಣಿವಾರಿಸಿಕೊಳ್ಳಲು ರಸ್ತೆ ಬದಿಯಲ್ಲಿದ್ದ ಒಂದು ಮರದ ಕಟ್ಟೆಯಮೇಲೆ ಬಂದು ಕುಳಿತನಂತೆ.ಒಂದು ಕಡೆಯಿಂದ ಬೆವರು ಮತ್ತೊಂದು ಕಡೆಯಿಂದ ನೀರಡಿಕೆ ಹೆಚ್ಚಾದಾಗ ಆತ ಸಹಜವಾಗಿ ಸುತ್ತ ಮುತ್ತ ನೋಡತೊಡಗಿದ.ಆಗ ಆತನ ಕಣ್ಣಿಗೆ ಅದೇ ಕಟ್ಟೆಯ ಬಲ ಭಾಗದ ಕೆಳಗೆ ಒಂದು ಬಣ್ಣದ ಬೀಸಣಿಕೆ ಬಿದ್ದಿರುವುದು ಕಂಡಿತಂತೆ.ಅದು
ಮಾಯಾ ಬೀಸಣಿಕೆ ಎನ್ನುವ ಗುಟ್ಟು ಆತನಿಗೆ ಗೊತ್ತಿರಲಿಲ್ಲವಂತೆ.ಕುತೂಹಲದಿಂದ
ಅದನ್ನು ಎತ್ತಿಕೊಂಡು ಒಮ್ಮೆ ಆ ಬದಿ ಈ ಬದಿ ತಿರುಗಿಸಿ, ಅದರಿಂದ ಗಾಳಿ ಬೀಸಿಕೊಳ್ಳುತ್ತ ಮನದಲ್ಲಿ”ಈ ಸಮಯದಲ್ಲಿ ಸ್ವಲ್ಪ ತಣ್ಣನೆಯ ನೀರು ಕುಡಿಯಲು ಸಿಕ್ಕರೆ ಸಾಕಪ್ಪಾ…”ಎಂದು ಅಂದು ಕೊಳ್ಳತ್ತಿದ್ದಂತೆ ಆತನ ಪಕ್ಕದಲ್ಲಿ ತಣ್ಣಗಿನ ನೀರು ತುಂಬಿದ ಹೂಜಿ, ಲೋಟಗಳು ಬರತೊಡಗಿದವಂತೆ.ಆಶ್ಚರ್ಯಚಿಕಿತನಾದ ಭಿಕ್ಷುಕ, ಗಾಳಿ ಬೀಸಿಕೊಳ್ಳುವುದನ್ನು ನಿಲ್ಲಿಸಿ, ನೀರು ಕುಡಿಯಲು ಮುಂದಾದಾಗ ಸಾಲು ಗಟ್ಟಲೆ ಬರುತ್ತಿದ್ದ ಹೂಜಿ ಗಳು ನಿಂತುಬಿಟ್ಟವಂತೆ.ಆಗ ಆತನಿಗೆ ಪ್ರಾಯಶಃ ಇದೆಲ್ಲೋ.. ಮಾಯಾ ಬೀಸಣಿಕೆ ಇರಬಹುದೆಂದು ಅನಿಸಿ, ಅದನ್ನು ಪರೀಕ್ಷೆ ಮಾಡಲೆಂದು , ಸಣ್ಣದಾಗಿ ಗಾಳಿ ಬೀಸಿಕೊಳ್ಳುತ್ತ ಮನದಲ್ಲಿ “ತುಂಬಾ ಹಸಿವಾಗ್ತಿದೆ
ತಿನ್ನಲು ಒಂದಿಷ್ಟು ಆಹಾರ ದೊರೆತರೆ…..”ಎಂದುಕೊಂಡ.ಇದೇನಾಶ್ಚರ್ಯ!
ಆತ ಗಾಳಿ ಬೀಸುವುದನ್ನು ನಿಲ್ಲಿಸುವ ತನಕ ಅನ್ನ-ಸಾರು-ಪಲ್ಯ,ಪಾಯಸ ತುಂಬಿದ
ಪಾತ್ರೆಗಳು ಒಂದರ ಹಿಂದೆ ಮತ್ತೊಂದರಂತೆ ಬರತೊಡಗಿದವು.ಅದನ್ನು ಕಂಡವ
“ಹಾಂ…ಇದರ ಗುಟ್ಟು ಇಷ್ಟೇ….”ಎಂದು ಖಚಿತ ಪಡಿಸಿಕೊಂಡು ಸಂತಸಪಟ್ಟು ಆ ಬೀಸಣಿಕೆ ಯನ್ನು ಪಕ್ಕದಲ್ಲಿಟ್ಟು ಊಟ ಮಾಡತೊಡಗಿದನಂತೆ.ಒಬ್ಬ ಮನುಷ್ಯ ಎಷ್ಟು ತಾನೇ ತಿನ್ನಲು ಸಾಧ್ಯ? ಹೀಗಾಗಿ ಆತ ತೃಪ್ತಿ ಯಾಗುವಷ್ಟು ತಿಂದು ಉಳಿದ ಆಹಾರವನ್ನು ಅದೇ ಮರದ ಹಿಂಬದಿ ನೆರಳಲ್ಲಿ ಕುಳಿತಿದ್ದ ಹತ್ತಾರು ದನ-ಕರು ಗಳಿಗೆ
ಅದನ್ನು ಉಣಬಡಿಸಿದ.ಆತ ಅಲ್ಲಿಂದ ವಾಪಸ್ ಬರುವಷ್ಟರಲ್ಲಿ ಅದೇ ಮರದ ಮೇಲಿದ್ದ ಒಂದು ಮಂಗ ಸರಸರನೇ ಇಳಿದು ಬಂದು ಆ ಬಣ್ಣದ ಬೀಸಣಿಕೆ ಎತ್ತಿಕೊಂಡು ಅಷ್ಟೇ ವೇಗದಲ್ಲಿ ಹೋಗಿ ಮೇಲಿನ ಕೊಂಬೆಮೇಲೆ ಕುಳಿತು ಬಿಟ್ಟಿತಂತೆ.ಇತ್ತ ಭಿಕ್ಷುಕನಿಗೆ ತಾನು ಇಟ್ಟಿದ್ದ ಬೀಸಣಿಕೆ ಕಾಣದಾದಾಗ ಅವ, ಅತ್ತ ಇತ್ತ,ಸುತ್ತ ಮುತ್ತ ಹುಡುಕಾಡಿ ಕೊನೆಗೆ ಕತ್ತೆತ್ತಿ ಮೇಲೆ ನೋಡಿದಂತೆ.ಮರದ ಮೇಲೆ ಕುಳಿತ ಮಂಗನ ಕೈಯಲ್ಲಿ ಬೀಸಣಿಕೆ ಇರುವುದನ್ನು ಕಂಡು,ಆತ ನಿಂತಲ್ಲಿಂದಲೇ ಅದರತ್ತ ಕೈಬೀಸಿ “ಹಾ..ಹೂ..ಶೂ, ಅದನ್ನು ಕೆಳಕ್ಕೆ ಹಾಕು..”ಎಂದು ಬೊಬ್ಬೆ ಹಾಕತೊಡಗಿದನಂತೆ.ಪಾಪ ಆ ಮಂಗನಿಗೆ ಮನುಷ್ಯನ ಭಾಷೆ ಅರ್ಥವಾದೀತೇ?
ಹೀಗಾಗಿ ಅದು ತನ್ನ ಪಾಡಿಗೆ ತಾನು ಬೀಸಣಿಕೆ ಯನ್ನು ಹಿಂದೆ ಮುಂದೆ ತಿರುಗಿಸುತ್ತ
ಮನದಲ್ಲಿ”ಥೂ…ಇದರ ಬದಲು ಬಾಳೇ ಹಣ್ಣಾದರೂ ಸಿಗಬಾರದಿತ್ತಾ?”ಎಂದು
ಹೇಳಿ ಕೊಂಡ ಮರುಕ್ಷಣವೇ ದೊಡ್ಡ ದೊಡ್ಡ ಬಾಳೆಹಣ್ಣಿನ ಗೊನೆಗಳು ಮರದ ಮೇಲಿನಿಂದ ಬೀಳಲಾರಂಭಿಸಿದವಂತೆ.ಮಂಗಣ್ಣ ಅದನ್ನು ಕಂಡು ಖುಷಿ ಯಿಂದ”ಹಾಂ.. ಬಾಳೆಹಣ್ಣು-ಬಾಳೆಹಣ್ಣು..”ಎಂದು ಅರಚುತ್ತ, ತನ್ನ ಕೈಯಲ್ಲಿದ್ದ ಬೀಸಣಿಕೆ ಯನ್ನು ಪಕ್ಕದ ಕೊಂಬೆಯ ಮೇಲಿಟ್ಟು ಹತ್ತಿರದಲ್ಲಿದ್ದ ತನ್ನ ಬಂಧು ಬಳಗದವರೆನ್ನೆಲ್ಲ ಕೂಗಿ ಕರೆದು ತೃಪ್ತಿಯಿಂದ ಹಣ್ಣು ತಿನ್ನತೊಡಗಿತಂತೆ.ಅಷ್ಟರಲ್ಲಿ
ಎಲ್ಲಿಂದಲೋ ಜೋರಾಗಿ ಗಾಳಿ ಬೀಸಿ ಬಂದಾಗ, ಮಂಗಣ್ಣ ಇರಿಸಿದ್ದ ಆ ಬಣ್ಣದ (ಮಾಯಾ) ಬೀಸಣಿಕೆ ಗಾಳಿಯೊಂದಿಗೆ ಹಾರಿ ಬಂದು ಹತ್ತಿರದ ಜುಳು ಜುಳು ಹರಿಯುವ ನದಿಗೆ ಬಿದ್ದಿತಂತೆ.ಹಾಗೇ ಅದು ನೀರಿನೊಂದಿಗೆ ತೇಲಿ ಹೋಗುತ್ತಿರುವಾಗ ನೂರಾರು ಮೀನುಗಳು ಸಿಲುಕಿದ ಬಲೆಯಲ್ಲಿ ಬಂದು ಸೇರಿಬಿಟ್ಟಿತಂತೆ.ಅದನ್ನು ಕಂಡು ಗಾಬರಿಗೊಳಗಾದ ಮೀನುಗಳು”ಇದ್ಯಾವುದೋ ವಿಚಿತ್ರ ಜಲಚರ ಇದ್ದಂತಿದೆ”ಎಂದು ಅಂದು ಕೊಳ್ಳುತ್ತ ಬೀಸಣಿಕೆ ಯನ್ನು ಅತ್ತಿಂದಿತ್ತ ತಳ್ಳೀ, ತಮ್ಮ ಪಾಡಿಗೆ ತಾವು”ಸಧ್ಯ ನಮಗೆ ಈ ಬಲೆಯಿಂದ ಬಿಡುಗಡೆ ಆದರೆ ಸಾಕು….”ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಂತೆ ಅವುಗಳು ಸಿಲುಕಿದ ಬಲೆ ಚೂರು ಚೂರಾಗಿಬಿಟ್ಟಿತಂತೆ.ಹರುಷಗೊಂಡ ಮೀನುಗಳೆಲ್ಲ ಕೇಕೆ ಹಾಕುತ್ತಾ ಅಲ್ಲಿಂದ ಪಲಾಯನ ಮಾಡಿದವಂತೆ.ಇತ್ತ ನದಿ ನೀರಿನ ಹರಿವು ಹೆಚ್ಚಾಗುತ್ತ ಬಂದಿದ್ದರಿಂದ ಆ ಬೀಸಣಿಕೆ ಅದರೊಂದಿಗೆ ತೇಲುತ್ತಾ ಬಂದು ಮುಂದೆ ಆಳದ ಪ್ರಪಾತಕ್ಕೆ ಬಿದ್ದು ಅದೃಶ್ಯ ವಾಗಿಬಿಟ್ಟಿತಂತೆ.